ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸಂಘಟನೆ- ಹೋರಾಟ: ಅನಂತ್ ವಿಜಯಯಾತ್ರೆಯ ಹಾದಿ...

Mainashree
Updated On : 26 May 2014, 11:09 am

ಬೆಂಗಳೂರು: ಸಂಘಟನೆ- ಹೋರಾಟದಿಂದಲೇ ಯುವಕರ ಮನಗೆದ್ದ ನಾಯಕ ಅನಂತಕುಮಾರ್. ಹೋರಾಟ ರಕ್ತಗತ. ಸ್ಟ್ರಾಟಜಿ ಬುದ್ಧಿಗತ!
ಸಾಮಾಜಿಕ ಅನ್ಯಾಯದ ವಿರುದ್ಧ ತಾಯಿ ಬೆಂಗಳೂರಿನಲ್ಲಿ ಹೋರಾಟ ನಡೆಸುತ್ತಿದ್ದಾಗ ಶಾಲೆಗೆ ಹೋಗುವ ಬಾಲಕನಾಗಿದ್ದರೂ ಅದರ ಉದ್ದೇಶವನ್ನು ಮನನ ಮಾಡಿಕೊಂಡಿದ್ದವರು ಅನಂತ್. ಇದು ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿದೆಸೆಯಲ್ಲಿದ್ದಾಗ ಹೊರಹೊಮ್ಮಿ, ಹೋರಾಟಕ್ಕಿಳಿದರು. ಹುಬ್ಬಳ್ಳಿಯಿಂದ ಆರಂಭವಾದ ಹೋರಾಟ, ಬೆಂಗಳೂರು ಸೇರಿದಂತೆ ರಾಜ್ಯದ ಉದ್ದಗಲಕ್ಕೂ ತಲುಪಿತು. ಅದು ರಾಷ್ಟ್ರಮಟ್ಟವನ್ನು ತಲುಪಿತು. ಅದಕ್ಕೇ ಯಾವುದೇ ಇತರೆ ಚುನಾವಣೆಗಿಂತ ನೇರವಾಗಿ ಇವರು ಆಯ್ಕೆಯಾಗಿದ್ದು ಸಂಸತ್‌ಗೆ. ಬೆಂಗಳೂರಿನಲ್ಲಿದ್ದ ಮಧ್ಯಮವರ್ಗ ಕುಟುಂಬದ ನಾರಾಯಣ ಶಾಸ್ತ್ರಿ ಮತ್ತು ಗಿರಿಜಾ ಎನ್. ಶಾಸ್ತ್ರಿ ಪುತ್ರರಾಗಿ 1959ರ ಜುಲೈ 22ರಂದು ಅನಂತಕುಮಾರ್ ಜನನ. ತಂದೆ ನಾರಾಯಣ ಶಾಸ್ತ್ರಿ ಅವರು ರೇಲ್ವೆ ಉದ್ಯೋಗಿಯಾಗಿದ್ದರು. ತಾಯಿ ಮಹಾರಾಣಿ ಕಾಲೇಜಿನಲ್ಲಿ ಪದವಿ ಪಡೆದ ನಂತರ ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಡುತ್ತಿದ್ದರು. ಈ ಮೂಲಕ ತಾಯಿಯಿಂದಲೇ ಹೋರಾಟದ ಪ್ರಥಮ ಶಿಕ್ಷಣ ಹುಟ್ಟಿನಿಂದಲೇ ಅನಂತ್ ಅವರಿಗೆ ಬಂದಿತು.
ಹುಬ್ಬಳ್ಳಿಯ ಕೆ.ಎಸ್. ಕಲಾ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದ ಅನಂತಕುಮಾರ್ ಅವರು, ಮೈಸೂರು ವಿವಿ ಮಾನ್ಯತೆ ಹೊಂದಿದ ಜೆ.ಎಸ್.ಎಸ್. ಕಾನೂನು ಶಾಲೆಯಲ್ಲಿ ಎಲ್‌ಎಲ್‌ಬಿ ಪದವಿ ಪಡೆದರು. ಅನಂತಕುಮಾರ್ ಅವರು ತೇಜಸ್ವಿನಿ ಅವರೊಂದಿಗೆ ವಿವಾಹವಾಗಿದ್ದು, ಐಶ್ವರ್ಯ, ವಿಜೇತ ಎಂಬ ಇಬ್ಬರು ಪುತ್ರಿಯರಿದ್ದಾರೆ.

ರಾಜಕೀಯ ಆರಂಭ
1987ರಲ್ಲಿ ಅನಂತಕುಮಾರ್ ರಾಜಕೀಯ ಪ್ರವೇಶಿಸಿದರು. ಬಿಜೆಪಿ ರಾಜ್ಯ ಕಾರ್ಯದರ್ಶಿ, ರಾಜ್ಯ ಯುವ ಮೋರ್ಚಾದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಆಗಿ ಕೆಲಸ ನಿರ್ವಹಿಸಿದರಲ್ಲದೆ, ರಾಷ್ಟ್ರೀಯ ಕಾರ್ಯದರ್ಶಿಯಾಗಿಯೂ ಸೇವೆ ಮಾಡಿದ್ದಾರೆ. 1996ರಲ್ಲಿ 11ನೇ ಲೋಕಸಭೆ ಚುನಾವಣೆಗೆ ಧುಮುಕಿದ ಅನಂತಕುಮಾರ್ ಅವರು ಕಾಂಗ್ರೆಸ್‌ನ ವರಲಕ್ಷ್ಮಿ ಗುಂಡೂರಾವ್ ಅವರನ್ನು ಸೋಲಿಸಿ ಲೋಕಸಭೆ ಪ್ರವೇಶಿಸಿದರು. 1998ರ 12ನೇ ಲೋಕಸಭೆ ಚುನಾವಣೆಯಲ್ಲಿ ಅನಂತಕುಮಾರ್  ಕಾಂಗ್ರೆಸ್‌ನ ಡಿ.ಪಿ. ಶರ್ಮಾ ವಿರುದ್ಧ  1,80,047 ಮತಗಳ ಅಂತರದಿಂದ ಜಯ ಸಾಧಿಸಿದರು. 1999ರ 13ನೇ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣದಲ್ಲಿ ಅನಂತಕುಮಾರ್ ಅವರಿಗೆ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್ ಎದುರಾಳಿಯಾದರೂ 66 ಸಾವಿರದ ಮತಗಳ ಅಂತರದಿಂದ ಗೆಲವು ಸಾಧಿಸಿದರು. 1998ರಲ್ಲಿ ಪ್ರಧಾನಿ ವಾಜಪೇಯಿ ಅವರ ಸಚಿವ ಸಂಪುಟದಲ್ಲಿ ಪ್ರಥಮ ಬಾರಿಗೆ ಸಚಿವರಾದರು. ನಾಗರಿಕ ವಿಮಾನಯಾನ ಖಾತೆ ನಿರ್ವಹಿಸಿದರು. ಇದಾದ ನಂತರ ಎನ್‌ಡಿಎ ಸರ್ಕಾರದಲ್ಲಿ ಪ್ರವಾಸೋದ್ಯಮ, ಕ್ರೀಡಾ ಮತ್ತು ಯುವಜನ, ಸಂಸ್ಕೃತಿ, ನಗರಾಭಿವೃದ್ಧಿ ಖಾತೆ ನಿರ್ವಹಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement