ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅಳಿವಿನಂಚಿನಲ್ಲಿ ಕಾಡು'ಪಾಪ'

Mainashree
Updated On : 27 May 2014, 9:27 am

ತುಮಕೂರು: ಬಯಲುಸೀಮೆ, ಮಲೆನಾಡು ಹಾಗೂ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಕಾಣಸಿಗುತ್ತಿದ್ದ ಆಕರ್ಷಕ ಅಪರೂಪದ ಕಾಡುಪಾಪಗಳು ಈಗ ಅಳಿವಿನಂಚಿಗೆ ತಲುಪಿವೆ.
ತನ್ನ ಆವಾಸ ಸ್ಥಾನವಾದ ಬಿದುರುಮೆಳೆ, ಸೀಗೆಮೆಳೆ ನಾಶವಾಗುತ್ತಿರುವುದು ಮತ್ತು ಅಪಘಾತಗಳಿಂದಾಗಿ ಈ ಅಪರೂಪದ ಪ್ರಾಣಿ ಸಂಕುಲ ಕಣ್ಮರೆಯಾಗುತ್ತಿವೆ.
ರಾತ್ರಿ ವೇಳೆ ಸಂಚರಿಸುವುದರಿಂದ ನಿಶಾಚರ ಪ್ರಾಣಿಯೆಂದೇ ಕರೆಸಿ ಕೊಳ್ಳುವ ಕಾಡುಪಾಪಗಳು ರಸ್ತೆ ದಾಟುವಾಗ ಅಪಘಾತಕ್ಕೆ ಸಿಲುಕಿ ಮೃತಪಡುತ್ತಿವೆ.
ತುಮಕೂರು ಜಿಲ್ಲೆ ನಾಗವಲ್ಲಿಯಲ್ಲಿ ಕಾಡುಪಾಪ ವನವಿದ್ದು ಇಲ್ಲೂ ಆವಾಸಸ್ಥಾನ ನಾಶ ಹಾಗೂ ಅಪಘಾತಗಳಿಂದ ದಿನೇ ದಿನೆ ಸಾವಿಗೀಡಾಗುತ್ತಿದ್ದು, ಇದರ ಸಂತತಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ.
ನೆಲೆವೀಡು: ಮಲೆನಾಡು, ಪಶ್ಚಿಮಘಟ್ಟ ಹಾಗೂ ಬಯಲುಸೀಮೆ ಕರ್ನಾಟಕದ ದೇವರಾಯನದುರ್ಗ, ನಾಗವಲ್ಲಿ, ಹೆಬ್ಬೂರು, ಕುಣಿಗಲ್, ಸಾವನದುರ್ಗ, ರಾಮನಗರ, ಬನ್ನೇರುಘಟ್ಟ, ಚಾಮರಾಜನಗರ ಮುಂತಾದ ಕಡೆ ಈ ಪ್ರಾಣಿಗಳ ನೆಲೆವೀಡು.
ಕಾಡುಪಾಪಗಳು ರಾತ್ರಿ ವೇಳೆ ಹೆಚ್ಚು ಚಟುವಟಿಕೆಯಿಂದ ಇರುತ್ತವೆ. ಆ ಸಮಯದಲ್ಲಿ ಆಹಾರ ತಿನ್ನುತ್ತವೆ ಮತ್ತು ಜೀವನ ಕ್ರಿಯೆಗಳನ್ನು ನಡೆಸುತ್ತವೆ. ಹಗಲಿನಲ್ಲಿ ಬಿದುರುಮೆಳೆ, ಸೀಗೇಮೆಳೆ, ದಟ್ಟವಾದ ಮರಗಳು ಮತ್ತು ಪೊದೆಗಳಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತವೆ. ಕೀಟಗಳು, ಹಲ್ಲಿ, ಓತಿಕ್ಯಾತ, ಸಣ್ಣಕಪ್ಪೆಗಳು, ಇಲಿಗಳು, ಪಕ್ಷಿಗಳ ಮರಿಗಳನ್ನು ತಿನ್ನುತ್ತವೆ.
ರೈತನ ಗೆಳೆಯ: ಕೆಲವೊಮ್ಮೆ ಸಣ್ಣ ಸಣ್ಣ ಬೇಲಿ ಹಣ್ಣುಗಳನ್ನು ತಿನ್ನುತ್ತವೆ. ಇವು ನಿರುಪದ್ರವಿ ಪ್ರಾಣಿ.
ಹಾನಿಕಾರಕ ಕೀಟಗಳನ್ನು ಇಲಿಗಳ ಮರಿಗಳನ್ನು ತಿಂದು ರೈತರಿಗೆ ಸಹಾಯಕನಾಗಿ ಕೆಲಸ ಮಾಡುತ್ತವೆ. ತೋಟಗಳಿರುವ ಆಸುಪಾಸಿನಲ್ಲಿ ಹೆಚ್ಚಾಗಿ ಇದು ಕಂಡು ಬರುತ್ತದೆ. ಆದರೆ ಅಪಘಾತ, ಆವಾಸಸ್ಥಾನ ಇಲ್ಲದಿರುವುದು ಮತ್ತು ವಿದ್ಯುತ್ ತಂತಿಗಳಿಂದ ಇವುಗಳ ಸಂತತಿ ಕ್ಷೀಣಿಸುತ್ತಿದೆ.
ಈ ಮೊದಲು ಕಾಡುಪಾಪವನ್ನು ರಾಜ್ಯ ಪ್ರಾಣಿಯನ್ನಾಗಿ ಘೋಷಿಸಿತ್ತು. ಆದರೆ ಇತ್ತೀಚಿನ ಬೆಳವಣಿಗೆಯಲ್ಲಿ ಅರಣ್ಯ ಇಲಾಖೆ ಆನೆಯನ್ನು ರಾಜ್ಯ ಪ್ರಾಣಿಯನ್ನಾಗಿ ಮಾಡಲು ಹೊರಟಿದೆ.
ಆದರೆ ಕಾಡುಪಾಪ ಅಪರೂಪದ, ಅಳಿವಿನಂಚಿನಲ್ಲಿರುವ ಹಾಗೂ ಇಂಟರ್ ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಷನ್ ಫಾರ್ ನೇಚರ್ ಅಂಡ್ ನ್ಯಾಚುರಲ್ ರಿಸೋರ್ಸ್(ಐಯುಸಿಎನ್) ಸಂಸ್ಥೆಯ ಪ್ರಕಾರ ಕೆಂಪು ಪಟ್ಟಿಗೆ ಸೇರಿಸಿರುವ ಪ್ರಾಣಿ.
ಇಂಥ ಅಪರೂಪದ ಪ್ರಾಣಿ ಸಂಕುಲವನ್ನು ಸಂರಕ್ಷಿಸಬೇಕು ಎಂದು ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಬಿ.ವಿ. ಗುಂಡಪ್ಪ ಒತ್ತಾಯಿಸಿದ್ದಾರೆ. ಜತೆಗೆ, ರಾಜ್ಯ ಸರ್ಕಾರ ಕಾಡುಪಾಪವನ್ನು ರಾಜ್ಯ ಪ್ರಾಣಿಯನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ.

- ಉಗಮ ಶ್ರೀನಿವಾಸ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement