ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬದಲಾವಣೆ ಬಯಸಿ ಚುನಾವಣೆಗೆ ಧುಮುಕಿದೆ: ಪ್ರತಾಪ್ ಸಿಂಹ

ಬದಲಾವಣೆಯ ದಾರಿಯಲ್ಲಿ ನಾನು ಸಾಗಬೇಕು ಎಂಬ ಹಂಬಲದಿಂದ...

Mainashree
Updated On : 27 May 2014, 10:53 am

ಬೆಂಗಳೂರು: ಬದಲಾವಣೆಯ ದಾರಿಯಲ್ಲಿ ನಾನು ಸಾಗಬೇಕು ಎಂಬ ಹಂಬಲದಿಂದ ಚುನಾವಣೆಗೆ ಧುಮುಕುವ ಧೈರ್ಯ ಮಾಡಿದೆ ಎಂದು ಮೈಸೂರಿನ ನೂತನ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಸುಮಾರು ಒಂದೂವರೆ ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ ಇದ್ದು ದಿಢೀರನೆ ರಾಜಕೀಯಕ್ಕೆ ಇಳಿಯುವ ಮಾತನ್ನಾಡಿದಾಗ ಎಲ್ಲರೂ ಆಶ್ಚರ್ಯ ಪಟ್ಟಿದ್ದರು. ಚುನಾವಣೆ ಫಲಿತಾಂಶದಲ್ಲಿ ಏರುಪೇರಾಗಿದ್ದರೆ ಏನು ಎಂಬ ಪ್ರಶ್ನೆಗಳನ್ನು ಹಲವರು ಕೇಳಿದ್ದರು. ಆದರೆ ದೇಶವೇ ಬದಲಾವಣೆಯತ್ತ ಮುಖ ಮಾಡಿರುವಾಗ ನಾನು ಅದರ ಭಾಗವಾಗಬೇಕು ಎಂದು ಅಂದು ನಿಶ್ಚಯಿಸಿದ್ದೆ ಎಂದು ಸಂಸದರಾಗಿ ಆಯ್ಕೆಯಾದ ಬಳಿಕ 'ಕನ್ನಡಪ್ರಭ' ಕಚೇರಿಗೆ ಮೊದಲ ಬಾರಿಗೆ ಭೇಟಿ ನೀಡಿದ್ದ ಪ್ರತಾಪ್ ಸಿಂಹ ಹೇಳಿದರು.  
ಸಂಸದನಾಗಿ ಲೋಕಸಭೆಗೆ ಹೋಗಿದ್ದರೂ ನನ್ನಲ್ಲಿ ಪತ್ರಕರ್ತ ಇದ್ದೇ ಇರುತ್ತಾನೆ. ಸಮಾಜದ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಪತ್ರಕರ್ತನಾಗಿದ್ದಾಗ ಅನಿಸಿದ್ದರೂ ಅದನ್ನು ಕಾರ್ಯಗತ ಮಾಡಲು ಕಷ್ಟವಾಗುತ್ತಿತ್ತು. ಆದರೆ ಇಂದು ಮೈಸೂರಿನ ಜನತೆ ಇದನ್ನು ಸಾಕಾರಗೊಳಿಸುವ ಜವಾಬ್ದಾರಿ ನೀಡಿದ್ದಾರೆ. ಮುಂದಿನ 5 ವರ್ಷಗಳಲ್ಲಿ ದೇಶದ ಅಭಿವೃದ್ಧಿಯಲ್ಲಾಗುವ ಬದಲಾವಣೆಗೆ ನಾವೆಲ್ಲ ಸಾಕ್ಷಿಯಾಗಲಿದ್ದೇವೆ. ಅದರಲ್ಲಿ ನಾನು ಒಂದು ಭಾಗವಾಗಿ ರಾಜ್ಯ ಹಾಗೂ ಮೈಸೂರಿನ ಜನತೆಯ ವಿಶ್ವಾಸ ಉಳಿಸಿಕೊಳ್ಳುತ್ತೇನೆ ಎಂದು ಪ್ರತಾಪ್ ಹೇಳಿದರು.
ಪತ್ರಕರ್ತನಾಗಿ ಇದ್ದಕ್ಕಿದ್ದಂತೆ ರಾಜಕೀಯಕ್ಕೆ ಪ್ರವೇಶಿಸುವುದು ಸುಲಭವಲ್ಲ. ಆದರೆ ಬಂದ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು. ಪ್ರತಿಯೊಬ್ಬರಿಗೂ ತಮ್ಮ ಕ್ಷೇತ್ರದಲ್ಲಿ ದೊಡ್ಡ ಸ್ಥಾನ ಅಲಂಕರಿಸುವ ಸಾಧ್ಯತೆ ಇರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement