ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಬಂಧನ ಶೀಘ್ರ: ಐಜಿ
ಸೋಮವಾರ ರಾತ್ರಿ ನಗರದಲ್ಲಿ ನಡೆದ ಘರ್ಷಣೆಗೆ ಮಾಜಿ...
ಬಿಜಾಪುರ: ಸೋಮವಾರ ರಾತ್ರಿ ನಗರದಲ್ಲಿ ನಡೆದ ಘರ್ಷಣೆಗೆ ಮಾಜಿ ಸಂಸದ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಪ್ರಚೋದನೆ ಪ್ರಮುಖ ಕಾರಣ, ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು ಬಂಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬೆಳಗಾವಿ ಉತ್ತರ ವಲಯ ಐಜಿ ಭಾಸ್ಕರ್ ರಾವ್ ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಕಾನೂನು ವ್ಯವಸ್ಥೆ ಕುರಿತಂತೆ ಜರುಗಿದ ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿಡಿಯೋ ದೃಶ್ಯಗಳನ್ನು ಪರಿಶೀಲಿಸಲಾಗಿದೆ. ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಸುಮಾರು 100 ಜನರು ಗಲಭೆಯಲ್ಲಿ ಪಾಲ್ಗೊಂಡಿರುವುದನ್ನು ಖಚಿತಪಡಿಸಿಕೊಳ್ಳಲಾಗಿದೆ. 26 ಜನರನ್ನು ಬಂಧಿಸಲಾಗಿದೆ. ಘಟನೆ ಬಳಿಕ ಯತ್ನಾಳ ಪರಾರಿಯಾಗಿದ್ದಾರೆ. ಅವರನ್ನು ಬಂಧಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನೇರವಾಗಿ ಹೇಳಿದರು.
ತನಿಖೆ: ಘಟನೆ ಕುರಿತಂತೆ ಧಾರವಾಡ ಎಸ್ಪಿ ಲೋಕೇಶಕುಮಾರ ಅವರಿಂದ ತನಿಖೆ ನಡೆಸಲಾಗುತ್ತಿದೆ. ಮೂರು ದಿನಗಳ ಕಾಲ ನಿಷೇಧಾಜ್ಞೆ ಮುಂದುವರಿಯಲಿದೆ ಎಂದರು.
ಯತ್ನಾಳ ಮೇಲೆ ನಾಲ್ಕು ಪ್ರಕರಣ: ಗಲಭೆ, ಪ್ರಚೋದನೆಯಲ್ಲಿ ಯತ್ನಾಳ ಪಾತ್ರ ನಿಚ್ಚಳವಾಗಿದೆ. ಇದಕ್ಕೂ ಮುನ್ನ ಅವರು ಮಾಡಿದ ಪ್ರಚೋದನಾಕಾರಿ ಭಾಷಣ, ನಿನ್ನೆಯ ಘಟನೆಯ ವಿಡಿಯೋ ಚಿತ್ರೀಕರಣ ಪರಿಶೀಲಿಸಲಾಗಿದೆ. ಅವರ ವಿರುದ್ಧ ನಾಲ್ಕು ಪ್ರಕರಣ ದಾಖಲಾಗಿದ್ದು, ಎಲ್ಲವೂ ಜಾಮೀನುರಹಿತ. ಘಟನೆಯ ಬಳಿಕ ಅವರು ಪರಾರಿಯಾಗಿದ್ದಾರೆ. ಬಂಧನಕ್ಕೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಭಾಸ್ಕರ್ ರಾವ್ ಹೇಳಿದರು.
ಯತ್ನಾಳ ಬಾಗಲಕೋಟೆ ಮಾರ್ಗವಾಗಿ ಹುಬ್ಬಳ್ಳಿಗೆ ತೆರಳಿದ ಮಾಹಿತಿ ಇದೆ. ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಯಾವುದೇ ಪರಿಸ್ಥಿತಿ ಎದುರಿಸಲು ಇಲಾಖೆ ಸಜ್ಜಾಗಿದೆ ಎಂದೂ ಸಹ ಅವರು ಸ್ಪಷ್ಟಪಡಿಸಿದರು.