ಮೊದಲ ಬಾಲ್‌ಗೇ ಮೋದಿ ಸಿಕ್ಸರ್, ದಾವೂದ್ ಒಪ್ಪಿಸಲು ಪಾಕಿಸ್ತಾನಕ್ಕೆ ತಾಕೀತು, ಕಪ್ಪು ಹಣಕ್ಕೆ ಎಸ್‌ಐಟಿ
ಪ್ರಧಾನಿಯಾದ ಮೊದಲ...
ನವದೆಹಲಿ: ಪ್ರಧಾನಿಯಾದ ಮೊದಲ ದಿನವೇ ತಾವೇನು, ತಮ್ಮ ಕಾರ್ಯಶೈಲಿ ಹೇಗೆಂಬುದನ್ನು ಮನದಟ್ಟು ಮಾಡಿಕೊಟ್ಟಿರುವ ನರೇಂದ್ರ ಮೋದಿ, ಆರಂಭದಲ್ಲೇ ಕೆಲ ದಿಟ್ಟ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ದಾವೂದ್ ಇಬ್ರಾಹಿಂ ಹಸ್ತಾಂತರ ಮತ್ತು ಉಗ್ರಗಾಮಿ ಕೃತ್ಯಗಳಿಗೆ ಬೆಂಬಲ ನೀಡುವುದನ್ನು ನಿಲ್ಲಿಸುವಂತೆ ಪಾಕ್‌ಗೆ ಒತ್ತಡ, ಭಾರತೀಯರು ವಿದೇಶಿ ಬ್ಯಾಂಕ್‌ಗಳಲ್ಲಿ ಇರಿಸಿರುವ ಕಪ್ಪುಹಣದ ತನಿಖೆಗೆ ವಿಶೇಷ ತನಿಖಾ ತಂಡ ರಚನೆ ಇವು ಮಂಗಳವಾರ ಮೋದಿ ಇಟ್ಟ ಮಹತ್ವದ ಹೆಜ್ಜೆಗಳು. ಸಂವಿಧಾನದ 370ನೇ ವಿಧಿ ಅಡಿ ಜಮ್ಮು-ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನ ವಾಪಸ್‌ಗೆ ಚಿಂತನೆ ನಡೆಸಿರುವುದಾಗಿ ಘೋಷಿಸುವ ಮೂಲಕ ಸರ್ಕಾರ ಕಣಿವೆ ರಾಜ್ಯದಲ್ಲಿ ಸಂಚಲನ ಮೂಡಿಸಿದೆ.
ಪ್ರಧಾನಿಯಾದ ಕ್ಷಣದಿಂದ ಹೀಗೆಯೇ ಕಾರ್ಯನಿರ್ವಹಿಸಬೇಕು ಎಂಬುದನ್ನು ಮೊದಲೇ ನಿಶ್ಚಯಿಸಿಕೊಂಡಂತಿತ್ತು ಮೋದಿ ಅವರ ಮಂಗಳವಾರದ ವೈಖರಿ. ಈ ಶರವೇಗ ನಿರೀಕ್ಷಿಸಿದ್ದ ಅವರ ಸಂಪುಟದ ಬಹುತೇಕ ಸಹೋದ್ಯೋಗಿಗಳು ಮತ್ತು ಅಧಿಕಾರಶಾಹಿ ಸಹ ಅವರ ವೇಗಕ್ಕೆ ಸ್ಪಂದಿಸುವ ಪ್ರಯತ್ನ ಮಾಡಿದ್ದು ವಿಶೇಷ. ಇಡೀ ದಿನ ಸರಣಿ ಸಭೆಗಳಲ್ಲಿ ಭಾಗವಹಿಸಿದರೂ ಬೆಳಗ್ಗೆ ಇದ್ದ ಮಂದಹಾಸವೇ ದಿನದ ಕೊನೆಯಲ್ಲಿಯೂ ಪ್ರಧಾನಿ ಮುಖದಲ್ಲಿ ಮಿನುಗುತ್ತಿತ್ತು.
ಬೆಳಗ್ಗೆ 9ಕ್ಕೆ ಸರಿಯಾಗಿ ಸೌತ್‌ಬ್ಲಾಕ್‌ನಲ್ಲಿರುವ ಕಾರ್ಯಾಲಯ ಪ್ರವೇಶಿಸಿದ ಮೋದಿ, ಪ್ರಧಾನಿಯಾಗಿ ಅಧಿಕೃತವಾಗಿ ಕಾರ್ಯಭಾರ ವಹಿಸಿಕೊಂಡರು. ಮೊದಲು ಮಾಡಿದ ಕೆಲಸ ಎಂದರೆ ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ್ದು. ಅಲ್ಪಸಮಯದಲ್ಲಿಯೇ 'ಇಂದು ದೇಶದ ಮೊದಲ ಪ್ರಧಾನಿ ನೆಹರೂ 50ನೇ ಪುಣ್ಯತಿಥಿ. ದೇಶಕ್ಕೆ ಅವರ ಕೊಡುಗೆ ಸ್ಮರಿಸುವೆ' ಎಂದು ಟ್ವೀಟಿಸುವ ಮೂಲಕ ಗೌರವ ಸಲ್ಲಿಸಿದರು.
ನಂತರ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್, ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಸೇರಿದಂತೆ ಸಾರ್ಕ್ ದೇಶಗಳ ಮುಖಂಡರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದರು. ಷರೀಫ್ ಜತೆ ಭಯೋತ್ಪಾದನೆ ನಿಗ್ರಹ, ದಾವೂದ್ ಹಸ್ತಾಂತರ ವಿಚಾರ ಪ್ರಸ್ತಾಪಿಸಿದರೆ; ಮೀನುಗಾರರ ಬಿಡುಗಡೆಗೆ ಶ್ರೀಲಂಕಾ ಅಧ್ಯಕ್ಷರನ್ನು ಆಗ್ರಹಿಸಿದರು. ಸ್ನೇಹ ಉಳಿಸಿಕೊಂಡೂ, ನಿಷ್ಠುರವಾಗಿ ಆಡಲೇಬೇಕಾದ ಮಾತುಗಳ ಮೂಲಕ ತಾವು ರಾಜತಾಂತ್ರಿಕ ನಿಪುಣ ಎಂದು ನಿರೂಪಿಸಿದರು.
ಸರ್ಕಾರ ಕಿರಿದಾಯಿತು
ಉಮಾ ಭಾರತಿ ಸೇರಿದಂತೆ ಕೆಲವು ಹಿರಿಯ ಸಚಿವರು ತಮಗೆ ಸಿಗಲಿರುವ ಖಾತೆಗಳ ಕುರಿತು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದರು. ತಕ್ಷಣ ಎಚ್ಚೆತ್ತ ಪ್ರಧಾನಿ, ಖಾತೆ ಹಂಚಿಕೆ ಪಟ್ಟಿಯನ್ನು ರಾಷ್ಟ್ರಪತಿ ಭವನಕ್ಕೆ ರವಾನಿಸಿದರು. ಅಲ್ಲಿಯೂ ತಾವು ಹೇಳಿದಂತೆ ಸರ್ಕಾರದ ಗಾತ್ರ ಕಡಿಮೆ ಮಾಡಿದ್ದರು ಪ್ರಧಾನಿ. ಪರಸ್ಪರ ಸಂಬಂಧ ಇರುವ 17 ಖಾತೆಗಳನ್ನು ವಿಲೀನಗೊಳಿಸಿ, ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕುವ ಪ್ರಯತ್ನಕ್ಕೆ ಚಾಲನೆ ನೀಡಿದ್ದಾರೆ.
ಸಿಂಗ್ ಭೇಟಿ
ಏತನ್ಮಧ್ಯೆ, ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ನಿವಾಸಕ್ಕೆ ತೆರಳಿ ಅವರನ್ನು ಭೇಟಿ ಮಾಡಿದ್ದರು ಮೋದಿ. 'ಇದು ಸೌಹಾರ್ದದ ಭೇಟಿ' ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.
ಮೋದಿ ದಿನ ಹೇಗಿತ್ತು?
- ಬೆ.9ಕ್ಕೆ ಸರಿಯಾಗಿ ಗುಜರಾತ್ ಭವನದಿಂದ ಸೌತ್‌ಬ್ಲಾಕ್ ಕಾರ್ಯಾಲಯಕ್ಕೆ ಆಗಮನ
- ಗಾಂಧಿ ಸ್ಮರಣೆ, ನೆಹರುಗೆ ಗೌರವ
- ಸಾರ್ಕ್ ಪ್ರಮುಖರೊಂದಿಗೆ ಪ್ರತ್ಯೇಕ ಸಭೆ
- ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಭೇಟಿ
- ಮ.12.45- ಹೈದರಾಬಾದ್ ಭವನದಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್ ಭೇಟಿ
- ಸಂಜೆ 6- ಸಚಿವ ಸಂಪುಟದ ಮೊದಲ ಸಭೆ
- ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ