ಶೀಘ್ರದಲ್ಲೇ ಪೂರ್ಣಾವಧಿ ರಕ್ಷಣಾ ಸಚಿವ
ಕೆಲವೇ ವಾರಗಳಲ್ಲಿ ರಕ್ಷಣಾ ಖಾತೆಗೆ ಪೂರ್ಣ ಪ್ರಮಾಣದ ಸಚಿವರ ನೇಮಕ...
ನವದೆಹಲಿ: ಕೆಲವೇ ವಾರಗಳಲ್ಲಿ ರಕ್ಷಣಾ ಖಾತೆಗೆ ಪೂರ್ಣ ಪ್ರಮಾಣದ ಸಚಿವರ ನೇಮಕ ಆಗಲಿದೆ ಎಂದು ರಕ್ಷಣಾ ಖಾತೆಯ ಹೆಚ್ಚುವರಿ ಹೊಣೆ ಹೊತ್ತಿರುವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಈ ಮೂಲಕ ನರೇಂದ್ರ ಮೋದಿ ಸಚಿವ ಸಂಪುಟ ಶೀಘ್ರವೇ ಮೊದಲ ವಿಸ್ತರಣೆ ಕಾಣಲಿದೆ ಎಂಬ ಪರೋಕ್ಷ ಸೂಚನೆ ನೀಡಿದ್ದಾರೆ.
ವಿರೋಧವಿಲ್ಲ: ಭೂಸೇನೆ ಮುಖ್ಯಸ್ಥರ ಆಯ್ಕೆಗೆ ಸಂಬಂಧಿಸಿ ಯುಪಿಎ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ್ದ ಬಿಜೆಪಿ ಈಗ ಸೇನಾ ಮುಖ್ಯಸ್ಥರ ನೇಮಕದಲ್ಲಿ ಯಾವುದೇ ವಿವಾದವಿಲ್ಲ ಎಂದು ಹೇಳಿದೆ.
ಮಂಗಳವಾರ ಮಾತನಾಡಿದ ರಕ್ಷಣಾ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ, ಯಾವುದೇ ವ್ಯಕ್ತಿಯ ನೇಮಕ ಕುರಿತು ವಿವಾದವಿಲ್ಲ. ದೇಶದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದಾಗ ಸೇನಾ ಮುಖ್ಯಸ್ಥರ ನೇಮಕ ಪ್ರಕ್ರಿಯೆ ನಡೆಸಿದ್ದಕ್ಕೆ ಟೀಕಿಸಿದ್ದೆವೇ ಹೊರತು ಯಾವುದೇ ವ್ಯಕ್ತಿಯನ್ನು ವಿರೋಧಿಸಿಲ್ಲ ಎಂದಿದ್ದಾರೆ.
ವಿತ್ತೀಯ ಕೊರತೆ, ಹಣದುಬ್ಬರ ನಿಯಂತ್ರಣಕ್ಕೆ ಒತ್ತು: ನಾನು ಬಹುದೊಡ್ಡ ಸವಾಲಿನ ಸಮಯದಲ್ಲೇ ವಿತ್ತ ಸಚಿವಾಲಯದ ಅಧಿಕಾರ ವಹಿಸಿಕೊಂಡಿದ್ದೇನೆ. ವಿತ್ತೀಯ ಕೊರತೆ ಹಾಗೂ ಹಣದುಬ್ಬರ ನಿಯಂತ್ರಣಕ್ಕೆ ಆದ್ಯತೆ ನೀಡುತ್ತೇನೆ.
ಇದು ಹಣಕಾಸು ಸಚಿವರಾಗಿ ಮಂಗಳವಾರ ಅಧಿಕಾರ ವಹಿಸಿಕೊಂಡ ಜೇಟ್ಲಿ ಅವರ ಮಾತು. ಆರ್ಥಿಕ ಪ್ರಗತಿಯನ್ನು ಮತ್ತೆ ಹಳಿಗೆ ತರುವುದು, ಹಣದುಬ್ಬರಕ್ಕೆ ಕಡಿವಾಣ ಹಾಕುವುದು ಹಾಗೂ ಹಣಕಾಸಿನ ಕ್ರೋಡೀಕರಣ ನಮ್ಮ ಮುಂದಿರುವ ಸವಾಲಾಗಿದೆ. ಇವುಗಳನ್ನೆಲ್ಲ ಒಂದೊಂದಾಗಿ ಮಾಡಲಿದ್ದೇವೆ. ಬೆಲೆಯೇರಿಕೆ ನಿಯಂತ್ರಿಸುವುದು ಹಾಗೂ ಆರ್ಥಿಕತೆ ಬಗ್ಗೆ ಹೂಡಿಕೆದಾರರಲ್ಲಿ ಆತ್ಮವಿಶ್ವಾಸ ಮೂಡುವಂತಹ ಕ್ರಮಗಳನ್ನೂ ಕೈಗೊಳ್ಳಲಿದ್ದೇವೆ ಎಂದೂ ಜೇಟ್ಲಿ ತಿಳಿಸಿದ್ದಾರೆ.