ವಾಘಾದಲ್ಲಿ ಸ್ಫೋಟ: ಗಡಿಯಲ್ಲಿ ತೀವ್ರ ಕಟ್ಟೆಚ್ಚರ
ವಾಘಾ ಗಡಿಯಲ್ಲಿ ಭಾನುವಾರ ಸಂಜೆ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ...
ಅಮೃತಸರ್: ವಾಘಾ ಗಡಿಯಲ್ಲಿ ಭಾನುವಾರ ಸಂಜೆ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ಗಡಿ ರಕ್ಷಣಾ ಪಡೆ(ಬಿಎಸ್‌ಎಫ್)ಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಸ್ಫೋಟದ ನಂತರ ಭಾರತ-ಪಾಕ್ ಗಡಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ಬಿಎಸ್‌ಎಫ್ ಉಪ ಪೊಲೀಸ್ ಮಹಾನಿರ್ದೇಶಕ ಆರ್‌ಪಿಎಸ್ ಜೈಸ್ವಾಲ್ ಅವರು ಹೇಳಿದ್ದಾರೆ.
ನಿನ್ನೆ ಭಾರತ-ಪಾಕಿಸ್ತಾನ ಗಡಿಯಲ್ಲಿ ಉಭಯ ರಾಷ್ಟ್ರಗಳ ಧ್ವಜ ಇಳಿಸಿ ಪರಸ್ಪರ ಗೌರವ ಸಲ್ಲಿಸುವ ಕಾರ್ಯಕ್ರಮ ಮುಗಿದ ಕೆಲವೇ ಹೊತ್ತಿನಲ್ಲಿ ಪಾಕ್ ಗಡಿ ಪ್ರದೇಶದ ವಾಹನ ನಿಲುಗಡೆ ಪ್ರದೇಶದಲ್ಲಿ ಭಾರಿ ಸ್ಫೋಟ ಸಂಭವಿಸಿ ಮೂವರು ಸೇನಾ ಸಿಬ್ಬಂದಿ ಹಾಗೂ 11 ಮಹಿಳೆಯರು ಸೇರಿದಂತೆ 55 ಮಂದಿ ಮೃತಪಟ್ಟಿದ್ದರು.
ಘಟನೆಯಲ್ಲಿ ಅಕ್ಕಪಕ್ಕದ ಅಂಗಡಿ-ಮುಂಗಟ್ಟುಗಳೂ ಧ್ವಂಸವಾಗಿದೆ. ಅಲ್‌ಖೈದಾ ಬೆಂಬಲಿತ ಜನಾದುಲ್ಲಾ ಉಗ್ರ ಸಂಘಟನೆ ಈ ಸ್ಫೋಟದ ಹೊಣೆ ಹೊತ್ತಿದೆ. ಘಟನೆ ಸಂಬಂಧ ವರದಿ ನೀಡುವಂತೆ ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಆದೇಶಿಸಿದ್ದಾರೆ. ಅಲ್ಲದೆ ಲಾಹೋರ್ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.