ವಾಘಾ ಆತ್ಮಾಹುತಿ ದಾಳಿ: ಭಾರತವೇ ಉಗ್ರರ ಗುರಿಯಾಗಿತ್ತೆ?
ವಾಘಾ ಗಡಿಯಲ್ಲಿ ನಡೆದ ಆತ್ಮಾಹುತಿ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ತಮ್ಮ ತನಿಖೆ ಮುಂದುವರಿಸಿದ್ದರೂ...
ನವದೆಹಲಿ: ವಾಘಾ ಗಡಿಯಲ್ಲಿ ನಡೆದ ಆತ್ಮಾಹುತಿ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ತಮ್ಮ ತನಿಖೆ ಮುಂದುವರಿಸಿದ್ದರೂ, ಉಗ್ರರ ನಿಜವಾದ ಗುರಿ ಭಾರತ ಆಗಿತ್ತು ಎಂದು ಕೆಲವೊಂದು ಮೂಲಗಳು ವಾದಿಸುತ್ತಿವೆ.
ವಾಘಾ ಗಡಿಯಲ್ಲಿ ಭಾನುವಾರ ನಡೆದ ಆತ್ಮಾಹುತಿ ದಾಳಿಯಲ್ಲಿ ಸುಮಾರು 61 ಮಂದಿ ಸಾವಿಗೀಡಾಗಿದ್ದು, 100ಕ್ಕಿಂತಲೂ ಹೆಚ್ಚು ಮಂದಿಗೆ ಗಾಯಗಳಾಗಿದ್ದವು.
ಭಾನುವಾರ ಸಂಜೆ ಭಾರತ ಪಾಕ್ ಗಡಿಯಲ್ಲಿ ಎಂದಿವಂತೆ ಉಭಯ ದೇಶಗಳ ಸೇನೆಗಳು ಧ್ವಜಾರೋಹಣ ಕಾರ್ಯಕ್ರಮ ನಡೆಸಿದ್ದವು. ಅದು ಮುಗಿದ ಕೂಡಲೇ ವಾಹನ ನಿಲ್ದಾಣದ ಬಳಿ ಶಕ್ತಿಶಾಲಿ ಬಾಂಬ್ ಸ್ಫೋಟಗೊಂಡಿತು. ಮೊದಲು ಇದು ಸಿಲಿಂಡರ್ ಸ್ಫೋಟವೆಂದು ನಂಬಲಾಗಿತ್ತಾದರೂ, ನಂತರ ಅದು ಆತ್ಮಾಹುತಿ ದಾಳಿ ಎಂಬುದನ್ನು ಪಾಕ್ ಭದ್ರತಾ ಪಡೆಗಳು ಖಚಿತ ಪಡಿಸಿದ್ದವು.
ಆದಾಗ್ಯೂ, ಆತ್ಮಹತ್ಯಾ ದಾಳಿ ಮಾಡಿದವರ ಗುರಿ ಭಾರತವಾಗಿತ್ತು. ಆದರೆ ಆತ್ಮಾಹುತಿ ದಳದ ವ್ಯಕ್ತಿ ತುಸು ಮುನ್ನವೇ ಬಾಂಬ್ ಸ್ಫೋಟ ಮಾಡಿರುವುದರಿಂದ ಆತನ ಗುರಿ ತಪ್ಪಿದೆ ಎಂದು ಸುದ್ದಿಮೂಲವೊಂದು ವರದಿ ಮಾಡಿದೆ.
ಗುರುನಾನಕ್ ಅವರ ಜನ್ಮದಿನದ ಪ್ರಯುಕ್ತ ಸಿಖ್ ಯಾತ್ರಾರ್ಥಿಗಳು ಪಾಕಿಸ್ತಾನದಲ್ಲಿರುವ ನಾನ್ಕಾನಾ ಸಾಹೀಬ್ ಮಂದಿರಕ್ಕೆ ಭೇಟಿ ನೀಡುವ ಒಂದು ದಿನದ ಮುನ್ನ ಈ ಸ್ಫೋಟ ಸಂಭವಿಸಿರುವುದರಿಂದ, ಉಗ್ರರ ಗುರಿ ಭಾರತವೇ ಆಗಿತ್ತು ಎಂಬ ಸಂದೇಹ ಇಲ್ಲಿ ಹುಟ್ಟಿಕೊಂಡಿದೆ. ಮಾತ್ರವಲ್ಲದೆ ಮೊಹರಂ ಹಬ್ಬದ ಮುನ್ನಾದಿನವೇ ಈ ದಾಳಿ ಸಂಭವಿಸಿದೆ.
ಪಾಕಿಸ್ತಾನದ ತಾಲೀಬಾನ್ ಉಗ್ರ ಸಂಘಟನೆ ಈ ಸ್ಫೋಟದ ಹೊಣೆಯನ್ನು ಹೊತ್ತುಕೊಂಡಿದ್ದು, ಆತ್ಮಾಹುತಿ ದಾಳಿ ನಡೆಸಿದ ಬಾಂಬರ್ನ ದೇಹದ ಭಾಗವನ್ನು ಫಾರೆನ್ಸಿಕ್ ಪರೀಕ್ಷೆಗೆ ಒಳಪಡಿಸಲಾಗಿದೆ.