ರಾಹುಲ್ ಗಾಂಧಿ ಟೀಂನಲ್ಲಿ ಜಗದೀಶ್ ಟೈಟ್ಲರ್, ಸಜ್ಜನ್ ಕುಮಾರ್
ದೆಹಲಿಯಲ್ಲಿ ವಿಧಾನಸಭಾ ಚುನಾವಣೆ..
ನವದೆಹಲಿ: ದೆಹಲಿಯಲ್ಲಿ ವಿಧಾನಸಭಾ ಚುನಾವಣೆಯನ್ನೆದುರಿಸಲು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಹೊಸ ತಂಡವೊಂದನ್ನು ರಚಿಸಿದ್ದಾರೆ.
ಬಲ್ಲಮೂಲಗಳ ಪ್ರಕಾರ ರಾಹುಲ್ ನೇತೃತ್ವದ ಟೀಂನಲ್ಲಿ ಜಗದೀಶ್ ಟೈಟ್ಲರ್ ಮತ್ತು ಸಜ್ಜನ್ ಕುಮಾರ್ ಮೊದಲಾದವರು ಇದ್ದಾರೆ.
ಆದಾಗ್ಯೂ, ಟೈಟ್ಲರ್ ಮತ್ತು ಕುಮಾರ್ 1984 ಸಿಖ್ ವಿರೋಧಿ ದಂಗೆಯಲ್ಲಿ ಪಾಲ್ಗೊಂಡ ಆರೋಪಿಗಳಾಗಿದ್ದು, ಅವರನ್ನು ಟೀಂನಲ್ಲಿ ಸೇರಿಸಿರುವುದು ಪಕ್ಷದಲ್ಲೇ ಗೊಂದಲವನ್ನು ಸೃಷ್ಟಿಸಿದೆ.
ದೆಹಲಿ ಚುನಾವಣೆಯ ದಿನಾಂಕ ಇನ್ನೂ ನಿಕ್ಕಿಯಾಗಿಲ್ಲ. ಆದರೆ ವಿವಿಧ ಪಕ್ಷಗಳು ಚುನಾವಣೆಯನ್ನೆದುರಿಸಲು ಭರದ ಸಿದ್ಧತೆಯನ್ನು ನಡೆಸುತ್ತಿವೆ.
ರಾಹುಲ್ ಅವರ ಟೀಂ ಬಗ್ಗೆ ಗೊತ್ತಾದ ನಂತರ ಪ್ರತಿಕ್ರಿಯಿಸಿದ ಬಿಜೆಪಿ ವರ್ಕಾರ ಸಂಬಿತ್ ಪಾತ್ರಾ, ರಾಹುಲ್ ನಿರ್ಧಾರ ಕೇಳಿ ಶಾಕ್ ಆಗಿದೆ ಎಂದಿದ್ದಾರೆ.
ರಾಹುಲ್ ಟೀಂನಲ್ಲಿ ಒಟ್ಟು 8 ಜನರಿದ್ದು, ಟೈಟ್ಲರ್, ಕುಮಾರ್ ಸೇರಿದಂತೆ ಮಹಾಬಲ್ ಮಿಶ್ರಾ. ಮಾಟಿನ್ ಅಹ್ಮದ್, ಹರೂನ್ ಯೂಸಫ್, ಅರವಿಂದ್ ಸಿಂಗ್ ಲವ್ಲೀ , ಜೈ ಕಿಷನ್, ಜೆಪಿ ಅಗ್ರವಾಲ್ ಮೊದಲಾದವರಿದ್ದಾರೆ .
ದೆಹಲಿಯಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್‌ರನ್ನು ಟೀಂನಿಂದ ಕೈ ಬಿಡಲಾಗಿದೆ. ನಾನು ಇನ್ಮುಂದೆ ದೆಹಲಿ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂದು ಇತ್ತೀಚೆಗೆ ಶೀಲಾ ಹೇಳಿಕೆ ನೀಡಿದ್ದರು. ಅವರನ್ನು ತಂಡದಲ್ಲಿ ಸೇರ್ಪಡೆ ಮಾಡದೇ ಇರಲು ಈ ಹೇಳಿಕೆಯೂ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.
ಏತನ್ಮಧ್ಯೆ, ರಾಹುಲ್ ತಮ್ಮ ತಂಡದಲ್ಲಿ ಟೈಟ್ಲರ್ ಮತ್ತು ಸಜ್ಜನ್ ಕುಮಾರ್ ಅವರನ್ನು ಸೇರಿಸಿರುವುದರಿಂದ ಕಾಂಗ್ರೆಸ್‌ಗೆ ಸಿಖ್ ಜನಾಂಗದ ಮತ ಸಿಗುವುದು ಕಷ್ಟ ಎಂದೇ ಹೇಳಲಾಗುತ್ತಿದೆ.