ಆಂಧ್ರ ವಿಶ್ವವಿದ್ಯಾಲಯ - ಸಂಗ್ರಹ ಚಿತ್ರ 
ಪ್ರಧಾನ ಸುದ್ದಿ

ಮಾವೋವಾದಿ ಸಂಬಂಧ ಶಂಕೆ: ಆಂಧ್ರ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಬಂಧನ

ಆಂಧ್ರ ವಿಶ್ವವಿದ್ಯಾಯಲದ ಸಹ ಪ್ರಾಧ್ಯಾಪಕ ಜೆ ಅಪ್ಪರಾವ್ ಅವರನ್ನು ಬುಧವಾರ ಮಧ್ಯರಾತ್ರಿಯಲ್ಲಿ ವಿಶಾಖಪಟ್ಟಣದ ಗ್ರಾಮಾಂತರ ಪೊಲೀಸರು...

ವಿಶಾಖಪಟ್ಟಣ: ಆಂಧ್ರ ವಿಶ್ವವಿದ್ಯಾಯಲದ ಸಹ ಪ್ರಾಧ್ಯಾಪಕ ಜೆ ಅಪ್ಪರಾವ್ ಅವರನ್ನು ಬುಧವಾರ ಮಧ್ಯರಾತ್ರಿಯಲ್ಲಿ ವಿಶಾಖಪಟ್ಟಣದ ಗ್ರಾಮಾಂತರ ಪೊಲೀಸರು ನಿಗೂಢ ರೀತಿಯಲ್ಲಿ ಬಂಧಿಸಿದ್ದಾರೆ. ನಿಷೇಧಿತ ಮಾವೋವಾದಿಗಳ ಜೊತೆ ಸಂಬಂಧ ಇಟ್ಟುಕೊಂಡಿದ್ದರಿಂದ ಪ್ರಾಧ್ಯಾಪಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದು, ವಿಶ್ವವಿದ್ಯಾಯಲದ ಆವರಣದಲ್ಲಿ ಪ್ರಕ್ಷುಬ್ಧತೆಗೆ ಎಡೆ ಮಾಡಿ, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ವಿಶಾಖಪಟ್ಟಣದ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಮುಂದೆ ಧರಣಿ ನಡೆಸಿದರು.

ಆಂಧ್ರ ವಿಶ್ವವಿದ್ಯಾಲಯದ ವಸತಿ ಆವರಣದಿಂದ ಸಾಮಾನ್ಯ ಧಿರಿಸಿನಲ್ಲಿದ್ದ ಪೊಲೀಸರು ತೆಲುಗು ವಿಭಾಗದ ಸಹ ಪ್ರಾಧ್ಯಾಪಕ ಅಪ್ಪರಾವ್ ಅವರನ್ನು ಬಂಧಿಸಿದ್ದಾರೆ. ಬುಧವಾರ ಮಧ್ಯರಾತ್ರಿ ಸುಮಾರು ೧ ಘಂಟೆಗೆ ಮೂರು ಜನ ನಮ್ಮ ಮನೆಯ ಬಾಗಿಲನ್ನು ತಟ್ಟಿ, ಅಪ್ಪರಾವ್ ಅವರು ನಮ್ಮ ಜೊತೆ ಬರಬೇಕೆಂದು ಹೇಳಿದರು ಎಂದು ತಿಳಿಸಿದ ಕುಟುಂಬ ಸದಸ್ಯರು, "ಅವರು ಪೊಲೀಸರು ಎಂದಷ್ಟೆ ಹೇಳಿದರು ಆದರೆ ಯಾವುದೇ ಬಂಧನ ವಾರೆಂಟ್ ಆಗಲೀ ಅಥವಾ ಅವರ ಗುರುತು ಚೀಟಿಗಳನ್ನಾಗಲೀ ತೋರಿಸಲು ನಿರಾಕರಿಸಿದರು. ನೆರೆಹೊರೆಯವರು ನಮ್ಮ ಸಹಾಯಕ್ಕೆ ಬರುವ ಮೊದಲೇ ಪೊಲೀಸರು ನನ್ನ ಗಂಡನನ್ನು ಎಳೆದುಕೊಂಡು ಜೀಪಿನಲ್ಲಿ ಹಾಕಿಕೊಂಡು  ಹೊರಟುಹೋದರು" ಎಂದು ಪ್ರಾಧ್ಯಾಪಕರ ಪತ್ನಿ ಮೈನಾವತಿ ತಿಳಿಸಿದ್ದಾರೆ.

ಕಾಳ್ಗಿಚ್ಚಿನಂತೆ ಸುದ್ದಿ ಹರಡಿ ಸಹ ಪ್ರಾಧ್ಯಾಪಕರು ಮತ್ತು ವಿಧ್ಯಾರ್ಥಿಗಳು ಅಪ್ಪರಾವ್ ಅವರ ನಿವಾಸದ ಸುತ್ತ ಹೆಚ್ಚಿನ ಸಂಖ್ಯೆಯಲ್ಲಿ ನೆರೆದರು. ಬೆಳಗಾದಂತೆಯೆ ಕುಟುಂಬ ಸದಸ್ಯರು ಕೆಲವು ಸಂಶೋಧನಾ ವಿದ್ವಾಂಸರೊಂದಿಗೆ, ಅಪ್ಪರಾವ್ ತಮ್ಮ ನಿವಾಸದಿಂದ ಅಪಹರಣಗೊಂಡಿದ್ದಾರೆ ಎಂದು ನಗರ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ.

ಪ್ರಾದೇಶಿಕ ಸುದ್ದಿ ವಾಹಿನಿಗಳಲ್ಲಿ ಅಪ್ಪರಾವ್ ಅಪಹರಣದ ಸುದ್ದಿ ಬಿತ್ತರವಾದ ಕೂಡಲೇ, ಆಂದ್ರ ವಿಶ್ವವಿದ್ಯಾಲಯದ ವಿದ್ಯಾರ್ಥಿ ಮತ್ತು ಅಧ್ಯಾಪಕ ವರ್ಗದಿಂದ ಅಪ್ಪರಾವ್ ಕುಟುಂಬ ವರ್ಗಕ್ಕೆ ಬೆಂಬಲದ ಮಹಾಪೂರವೇ ಹರಿದು ಬಂತು. ವಿಶಾಖಪಟ್ಟಣದ ಏಜೆನ್ಸಿ ಪ್ರದೇಶದ, ಜಿ ಮಡುಗುಳ ಮಂಡಲದ ಕೊರ್ರಪಳ್ಳೆ ಪ್ರದೇಶದ ಮೂಲದ ಸಹ ಪ್ರಾಧ್ಯಾಪಕರು ಆದಿವಾಸಿ ಹಕ್ಕು ರಕ್ಷಣಾ ಹೋರಾಟಗಾರ ಎಂದೇ ಗುರುತಿಸಿಕೊಂಡಿದ್ದಾರೆ. ಬುಡಕಟ್ಟು ಪ್ರದೇಶದ ಬಡ ವಿಧ್ಯಾರ್ಥಿಗಳಿಗೆ ಹಣಕಾಸು ಸಹಾಯವನ್ನೂ ಮಾಡುತ್ತಿದ್ದ ಪ್ರಾಧ್ಯಾಪಕರು ಕರುಣಾಳು ಎಂದೇ ಹೆಸರುವಾಸಿ.

ಈ ಮಧ್ಯೆ,  ವಿಶಾಖಪಟ್ಟಣದ ಗ್ರಾಮಾಂತರ  ಪೊಲೀಸ್ ವರಿಷ್ಠಾಧಿಕಾರಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ, ಅಪ್ಪರಾವ್ ಅವರ ಎಡ ರಂಗದ ತೀವ್ರವಾದಿಗಳ ಜೊತೆಗಿನ ಸಂಬಂಧದ ಶಂಕೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ದೃಢೀಕರಿಸಿದ್ದು, ನಾವು ಅಪ್ಪರಾವ್ ಆವರ ಚಟುವಟಿಕೆಗಳನ್ನು ಬಹಳ ದಿನಗಳಿಂದ ಗಮನಿಸುತ್ತಿದ್ದು, ಅವರು ಮಾವೋವಾದಿ ಸಂಘಟನೆಗಳಿಗೆ ಮದ್ದು ಗುಂಡುಗಳ ಸಾಗಾಣೆ ಮಾಡುತ್ತಿದ್ದುದಕ್ಕೆ ನಮ್ಮಲ್ಲಿ ಸಾಕ್ಷ್ಯಾಧಾರಗಳಿವೆ ಎಂದಿದ್ದಾರೆ.

ಸೋಜಿಗವೆಂದರೆ, ಪೊಲೀಸರು ಪ್ರಾಧ್ಯಾಪಕರನ್ನು ಬಂಧಿಸುವ ಮುಂಚೆ ಕಡ್ಡಾಯವಾಗಿ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ವಿಷಯ ತಿಳಿಸಬೇಕಿದ್ದು, ಪೊಲೀಸರು ಅದನ್ನು ಮಾಡಿಲ್ಲ. ಆಂಧ್ರ ವಿಶ್ವವಿದ್ಯಾಲಯದ ಉಪಕುಲಪತಿ ಜಿ ಎಸ್ ಎನ್ ರಾಜು ಅವರನ್ನು ಸಂಪರ್ಕಿಸಿದಾಗ, ಬಹುಷಃ ಇದು ಬಹಳ ಸೂಕ್ಷ್ಮ ಮತ್ತು ಗಂಭೀರ  ವಿಷಯವಾದ್ದರಿಂದ ಪೊಲೀಸರು ನಮಗೆ ವಿಷಯ ತಿಳಿಸದೇ ಕಾರ್ಯ ನಿರ್ವಹಿಸರಬೇಕೆಂದಿದ್ದಾರೆ. ಆದರೆ ಬಂಧನರಾದ ಸಹ ಪ್ರಾಧ್ಯಾಪಕರು ಮುಗ್ಧ ಎಂದು ತಿಳಿಸಿ ಅಪ್ಪರಾವ್ ಅವರ ಬಿಡುಗಡೆಗೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಪೊಲೀಸರ ಜೊತೆ ಚರ್ಚೆ ನಡೆಸುತ್ತಿದ್ದಾರೆ ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್