ಪಾಟ್ನಾ: ತಮ್ಮ ಹತ್ತಿರದ ಕುಟುಂಬಿಕ ಸದಸ್ಯನನ್ನು ತಮ್ಮ ವೈಯಕ್ತಿಕ ನೌಕರನಾಗಿ ಕೆಲಸಕ್ಕೆ ತೆಗೆದುಕೊಂಡಿರುವ ಬಿಹಾರ ಮುಖ್ಯಮಂತ್ರಿ ಜೆಡಿಯು ನಾಯಕ ಜಿತನ್ ರಾಮ್ ಮಾಂಜಿ ಅವರ ಈ ನಡೆಯನ್ನು "ನೈತಿಕ ದಿವಾಳಿತನ" ಎಂದ ಬಿಜೆಪಿ, ಮುಖ್ಯಮಂತ್ರಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಮತ್ತು ಅವರ ಕುಟುಂಬ ಸದಸ್ಯನಿಗೆ ನೀಡಿದ ಎಲ್ಲ ವೇತನವನ್ನೂ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.
"ಮಾಂಜಿ ಅವರು ತಮ್ಮ ಅಳಿಯ ದೇವೇಂದ್ರ ಕುಮಾರ್ ಮತ್ತು ಸೋದರಳಿಯ ಸತ್ಯೇಂದ್ರ ಕುಮಾರ್ ಅವರನ್ನು ಕ್ರಮವಾಗಿ ವೈಯಕ್ತಿಕ ಸಹಾಯಕ ಮತ್ತು ಪೀವನ್ ಹುದ್ದೆಗಳಿಗೆ ೮ ವರ್ಷದ ಹಿಂದೆ ನೇಮಿಸಿಕೊಂಡಿದ್ದರು," ಎಂದು ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ವರದಿಗಾರರಿಗೆ ತಿಳಿಸಿದ್ದಾರೆ. ತಮ್ಮ ವೈಯಕ್ತಿಕ ನೌಕರರಾಗಿ ಯಾವುದೇ ಕೌಟುಂಬಿಕ ಸದಸ್ಯನನ್ನು ನೇಮಿಸಿಕೊಳ್ಳದಂತೆ ಮುಖ್ಯಮಂತ್ರಿ ಮತ್ತು ಇತರ ಮಂತ್ರಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ತಿಳುವಳಿಕೆ ಪತ್ರ ಕೊಡಬೇಕಾಗಿರುವುದರಿಂದ ಆ ಅಪರಾಧವನ್ನು ಸಮರ್ಥಿಕೊಳ್ಳುವಹಾಗೆಯೇ ಇಲ್ಲ ಎಂದು ದೂರಿದ್ದಾರೆ.
ತಮ್ಮ ಅಳಿಯನನ್ನು ಪಿಎ ಕೆಲಸದಿಂದ ವಜಾ ಮಾಡಿ, ತಾವು ಮುಗ್ಧರೆಂದು ಹೇಳಿಕೊಳ್ಳಲು ಸಾಧ್ಯವೇ ಇಲ್ಲ. ಮುಖ್ಯಮಂತ್ರಿಗಳು ಕೂಡಲೇ ರಾಜೀನಾಮೆ ಕೊಟ್ಟು, ತಮ್ಮ ಕುಟುಂಬದ ಸದಸ್ಯರಿಗೆ ಸರ್ಕಾರ ಕೊಟ್ಟಿರುವ ಸಂಬಳವನ್ನು ಮರು ವಸೂಲಿ ಮಾಡಬೇಕೆಂದು ಆಗ್ರಹಿಸಿದ್ದಾರೆ.
"ಈ ಹಿಂದೆ ಕಾಂಗ್ರೆಸ್-ಆರ್ ಜೆ ಡಿ ಸರಕಾರದಲ್ಲೂ ಕಾನೂನು ಉಲ್ಲಂಘಿಸುವುದು ಇವರ ಅಭ್ಯಾಸವಾಗಿತ್ತು. ಇವರು ೨೦೦೬ ರಲ್ಲಿ ಈ ತಿಳುವಳಿಕೆ ಪತ್ರ ಕೊಟ್ಟಿದ್ದಾರೆಯೆ ಎಂಬ ಸಂಶಯವಿದೆ" ಎಂದ ಮೋದಿ ಅವರು ಲಾಲು ಪ್ರಸಾದ್ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದಾಗ, ಇವರ ಪಿ ಎ ಶಿಕ್ಷಕರಿಂದ ದುಡ್ಡು ಪಡೆದು ಸಿಕ್ಕಿ ಬಿದ್ದಿದ್ದರು ಎಂದು ಕೂಡ ತಿಳಿಸಿದ್ದಾರೆ.