ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಆಪ್‌ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ತಾನು ಮುಂದಿನ 5-10 ವರ್ಷ ದೆಹಲಿಯತ್ತ ಗಮನ ನೆಟ್ಟಿರುತ್ತೇನೆ ಎಂದು ಗುರುವಾರ ಹೇಳಿದ್ದಾರೆ.
ಸರ್ಕಾರಿ ಉದ್ಯೋಗಿಯಾಗಿದ್ದ ಕೇಜ್ರಿವಾಲ್ ಸಮಾಜಸೇವೆಗೆ ಧುಮುಕಿ, ನಂತರ ರಾಜಕೀಯ ಪ್ರವೇಶಿಸಿದ್ದರು. ರಾಜಕೀಯಕ್ಕೆ ಪ್ರವೇಶಿಸಿ ಆಮ್ ಆದ್ಮಿ ಪಕ್ಷ ಸ್ಥಾಪಿಸಿದ ಕೇಜ್ರಿವಾಲ್ ದೆಹಲಿ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿ ಗದ್ದುಗೆಯೇರಿ ನಂತರ ರಾಜಿನಾಮೆ ನೀಡಿದ್ದರು.
ಇದೀಗ ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ವಿರುದ್ಧ ಪ್ರಬಲ ಸ್ಪರ್ಧಿಯಾಗಿರುವ ಆಪ್, ತಾವು ಚುನಾವಣೆಗಾಗಿ ಎಲ್ಲ ರೀತಿಯಲ್ಲಿಯೂ ಸಿದ್ಧ ಎಂದು ಹೇಳಿಕೊಂಡಿದೆ.
ನಾವೀಗ ದೆಹಲಿಯತ್ತ ಗಮನ ನೆಟ್ಟಿದ್ದೇವೆ. ನನಗೆ ಸಂಬಂಧಪಟ್ಟಂತೆ ಹೇಳುವುದಾದರೆ, ನಾನು ಮುಂದಿನ 5-10 ವರ್ಷಗಳ ಕಾಲ ದೆಹಲಿಯ ಬಗ್ಗೆ ಗಮನ ಹರಿಸಲಿದ್ದೇನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿ ಚುನಾವಣೆ ಮುಗಿಯುವವರೆಗೆ ನಾವು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಇಲ್ಲಿ ಚುನಾವಣೆ ಮುಗಿದ ನಂತರ ಎಲ್ಲಿ ಸ್ಪರ್ಧಿಸಬೇಕು? ಎಲ್ಲಿ ಸ್ಪರ್ಧಿಸಬಾರದು ಎಂದು ನಾವು ಯೋಚಿಸುತ್ತೇವೆ.
ಆದಾಗ್ಯೂ, ತಮಗೆ ಸರ್ಕಾರ ನಿಭಾಯಿಸಲು ಬರುವುದಿಲ್ಲ ಎಂಬ ಟೀಕೆಯನ್ನು ಕೇಜ್ರಿವಾಲ್ ತಳ್ಳಿ ಹಾಕಿದ್ದಾರೆ. ನಮ್ಮ ಅಧಿಕಾರಾವಧಿಯಲ್ಲಿ ನಮ್ಮ ಕಾರ್ಯ ವೈಖರಿಯನ್ನು ನೋಡಿ ಅಚ್ಚರಿಪಟ್ಟಿದ್ದಾರೆ ಎಂದು ಕೇಜ್ರಿವಾಲ್ ನುಡಿದಿದ್ದಾರೆ.
ನಾವು ನಮ್ಮ ಗೆಲವಿನ ಬಗ್ಗೆ ಹೆಚ್ಚಿನ ಆತ್ಮವಿಶ್ವಾಸ ಹೊಂದಿದ್ದೇವೆ. ಜನರು ನಮ್ಮ ಕಾರ್ಯಗಳನ್ನು, ನಿರ್ಧಾರಗಳನ್ನು ಶ್ಲಾಘಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಾವು ಗೆದ್ದು ಅಧಿಕಾರಕ್ಕೆ ವಾಪಸ್ ಬಂದೇ ಬರ್ತೀವಿ ಎಂದು ಕೇಜ್ರಿವಾಲ್ ಹೇಳಿದ್ದಾರೆ.