'ತಾಳಿ'ಮಾರಿ ಶೌಚಾಲಯ ಕಟ್ಟಿಸಿದಾಕೆಗೆ ಸನ್ಮಾನ
ಶೌಚಾಲಯ ನಿರ್ಮಿಸಲು ಆಕೆ ಗಂಡ ಕಟ್ಟಿದ ತಾಳಿಯನ್ನೇ ಮಾರಿದಳು! ಆಕೆಯ ಹೆಸರು ಸಂಗೀತಾ ಅವಾಹ್ಲೆ...
ಮುಂಬೈ: ಶೌಚಾಲಯ ನಿರ್ಮಿಸಲು ಆಕೆ ಗಂಡ ಕಟ್ಟಿದ ತಾಳಿಯನ್ನೇ ಮಾರಿದಳು! ಆಕೆಯ ಹೆಸರು ಸಂಗೀತಾ ಅವಾಹ್ಲೆ. ಮಹಾರಾಷ್ಟ್ರದ ವಾಶಿಂ ಜಿಲ್ಲೆಯ ಸೈಖೇಡಾ ಗ್ರಾಮದ ಸಂಗೀತಾ ಶೌಚಾಲಯ ನಿರ್ಮಿಸಲು ತನ್ನಲ್ಲಿದ್ದ ಎಲ್ಲ ಒಡವೆಗಳನ್ನು ಮಾರಿದ್ದಳು. ಈ ಕಾರ್ಯವನ್ನು ಪ್ರಶಂಸಿಸಿ ಮಹಾರಾಷ್ಟ್ರದ ಗ್ರಾಮಾಭಿವೃದ್ಧಿ ಸಚಿವ ಪಂಕಜ್ ಮುಂಡೇ ಗುರುವಾರ ಸಂಗೀತಾ ಅವರನ್ನು ಸನ್ಮಾನಿಸಿದ್ದಾರೆ.
ಒಡವೆಗಳಿಗೆ ಹೋಲಿಸಿದರೆ ಶೌಚಾಲಯಗಳು ನಮಗೆ ಅತ್ಯಗತ್ಯ. ಅದಕ್ಕಾಗಿ ನಾನು ನನ್ನಲ್ಲಿದ್ದ ಒಡವೆಗಳನ್ನು ಮಾರಿ ಶೌಚಾಲಯ ಕಟ್ಟಿಸಿದೆ ಎಂದು ಸಂಗೀತಾ ಹೇಳಿದ್ದಾರೆ.
ದೇಶದ ಹಾಗು ರಾಜ್ಯದ ಹಲವು ಪ್ರದೇಶಗಳಲ್ಲಿ ಶೌಚಾಲಯಗಳಿಲ್ಲ. ಇದರಿಂದಾಗಿ ಮಹಿಳೆಯರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ರಾಜ್ಯದಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ನಾನು ನನ್ನ ನಿಧಿಯಿಂದ ಶೇ. 25ರಷ್ಟು ಹಣವನ್ನು ಮೀಸಲಿಟ್ಟಿದ್ದೇವೆ ಎಂದು ಮುಂಡೇ ಹೇಳಿದ್ದಾರೆ.
ಮಹಿಳೆಯರಿಗೆ ಬಯಲಲ್ಲಿ ಶೌಚ ಮಾಡಬೇಕಾದ ಪರಿಸ್ಥಿತಿ ಬರದಂತೆ ನಾವು ನೋಡಿಕೊಳ್ಳಬೇಕಿ. ಅದಕ್ಕಾಗಿ ನಾವು ಹೆಚ್ಚಿನ ಸಂಖ್ಯೆಯಲ್ಲಿ ಶೌಚಾಲಯಗಳನ್ನು ನಿರ್ಮಿಸಬೇಕಾದ ಅವಶ್ಯಕತೆ ಇದೆ ಎಂದು ಮುಂಡೇ ಹೇಳಿದ್ದಾರೆ.
ಸನ್ಮಾನ ಸಮಾರಂಭದಲ್ಲಿ ಮುಂಡೇ ಅವರು ಸಂಗೀತಾ ಅವರಿಗೆ ಹೊಸ 'ತಾಳಿ'ಯನ್ನು ನೀಡಿ ಪ್ರಶಂಸೆ ವ್ಯಕ್ತ ಪಡಿಸಿದರು.