ನವ ದೆಹಲಿ: ಕಾಂಗ್ರೆಸ್ ನ ಹಿರಿಯ ನಾಯಕ ಅಭಿಷೇಕ್ ಮನು ಸಿಂಗ್ವಿ ಅವರು ವಿದೆಶದಲ್ಲಷ್ಟೇ ಅಲ್ಲದೆ ಸ್ವದೇಶದಲ್ಲೂ ಕಪ್ಪು ಹಣವನ್ನು ಜಮಾಯಿಸಿದ್ದಾರೆ ಎಂದು ಭಾರತೀಯ ಜನತಾ ಪಕ್ಷ ಆಪಾದಿಸಿದೆ.
ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಗ್ವಿ ಅವರು ತೆರಿಗೆ ವಂಚನೆ ಮಾಡಿ ಕಪ್ಪು ಹಣ ಸಂಗ್ರಹಿಸಿದ್ದಾರೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಆಪಾದಿಸಿದ್ದಾರೆ.
ಅಭಿಷೇಕ್ ಮನು ಸಿಂಗ್ವಿ ಅವರ ವೃತ್ತಿಪರ ಆದಾಯಕ್ಕೆ ಕಳೆದ ಮೂರು ವರ್ಷಗಳಿಗೆ ೯೧.೯೫ ಕೋಟಿ ಸೇರಿಸಿ, ೫೬.೫೭ ಕೋಟಿ ದಂಡ ವಿಧಿಸಿದ ಆದಾಯ ತೆರಿಗೆ ಇಲಾಖೆಯ ವಸೂಲಿ ಸಮಿತಿಯ ಈ ನಡೆಗೆ ಪ್ರತಿಕ್ರಿಯಿಸಿ ಸಂಬಿತ್ ಬಾತ್ರ, ಸಿಂಗ್ವಿ ಅವರ ವಿರುದ್ಧ ಹರಿಹಾಯ್ದಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ತಮ್ಮ ಸಿಬ್ಬಂದಿ ವರ್ಗಕ್ಕೆ ೫ ಕೋಟಿ ರೂ ಮೊತ್ತದ ಲ್ಯಾಪ್ ಟ್ಯಾಪ್ ಗಳನ್ನು ಖರೀದಿಸಿದ್ದೇನೆ ಎಂಬ ಸಿಂಗ್ವಿ ಅವರ ವಾದವನ್ನು ಕೂಡ ತೆರಿಗೆ ಇಲಾಖೆ ಪ್ರಶ್ನಿಸಿದೆ ಎಂದು ಬಾತ್ರಾ ತಿಳಿಸಿದ್ದಾರೆ.
ಕಾಂಗ್ರೆಸ್ ನ ಹಿರಿಯ ನಾಯಕರಾದ ಅಭಿಷೇಕ್ ಮನು ಸಿಂಗ್ವಿ ಅವರು ತೆರಿಗೆ ವಂಚನೆ ಮಾಡಿ ಭಾರತದಲ್ಲಿ ಕಪ್ಪು ಹಣ ಸಂಗ್ರಹಿಸುವುದು ಹೇಗೆಂದು ತೋರಿಸಿದ್ದಾರೆ. ಸಮಿತಿ ಅವರ ಮೇಲೆ ೫೬.೭೫ ಕೋಟಿ ರೂ ದಂಡ ವಿಧಿಸಿದೆ" ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ ಸಿಂಗ್ವಿ ಅವರಿಗೆ ತಮ್ಮ ಸಂಸ್ಥೆಯ ಖರ್ಚು ವೆಚ್ಚದ ದಾಖಲೆಗಳನ್ನು ಒದಗಿಸಲು ತೆರಿಗೆ ಇಲಾಖೆ ಸೂಚಿಸಿದ್ದಾಗ, ಎಲ್ಲ ವೌಚರ್ ಗಳನ್ನು ಗೆದ್ದಲು ತಿಂದಿದೆ ಎಂದು ಪ್ರತಿಕ್ರಿಯಿಸಿದ್ದರು.
ಸಿಂಗ್ವಿ ತಮ್ಮ ಸಂಸ್ಥೆಗೆ ಸೋಲಾರ್ ಪ್ಯಾನೆಲ್ ಗಳನ್ನು ಕೊಳ್ಳಲು ೩೫.೯೮ ಕೋಟಿ ಖರ್ಚಾಗಿದೆ ಎಂದು ತಿಳಿಸಿದ್ದರು. ಆದರೆ ಇದು ಪ್ಯಾನೆಲ್ ಗಳ ದರವನ್ನು ಸುಮ್ಮನೆ ಏರಿಸಿ, ತೆರಿಗೆ ವಂಚಿಸಲು ಮಾಡಿರುವ ಕಾರ್ಯ ಎಂದು ತೆರಿಗೆ ಇಲಾಖೆ ತಿಳಿಸಿದೆ.