ಬೆಂಗಳೂರು: ನಗರದ ಕಾರ್ಪೊರೇಷನ್ ವೃತ್ತದ ಕಾರ್ಪೊರೇಷನ್ ಬ್ಯಾಂಕ್ ಎಟಿಎಂನಲ್ಲಿ ಮಹಿಳೆ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ ಬರೋಬ್ಬರಿ ಒಂದು ವರ್ಷ. ಆದರೆ 44 ವರ್ಷದ ಮಹಿಳೆ ಜ್ಯೋತಿ ಉದಯ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ದುಷ್ಕರ್ಮಿಯನ್ನು ಪೊಲೀಸರು ಇನ್ನು ಬಂಧಿಸಿಲ್ಲ.
ಆರೋಪಿಯ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರುಪಾಯಿ ನಗದು ಬಹುಮಾನ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಅಲ್ಲದೆ ಬಹುಮಾನದ ಮೊತ್ತ ಹೆಚ್ಚಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರು ತಿಳಿಸಿದ್ದಾರೆ.
ಆದ್ಯತೆ ಮೇರೆಗೆ ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಆದರೂ ಆರೋಪಿಯ ಬಗ್ಗೆ ನಮಗೆ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ. ಮೊದಲ ನಾವು ಆ ವ್ಯಕ್ತಿ ಯಾರು ಎಂಬುದನ್ನು ಪತ್ತೆ ಹಚ್ಚಬೇಕಾಗಿದೆ. ಆತನ ಗುರುತು ಪತ್ತೆಯಾದರೆ ಬಂಧಿಸುವುದು ಕಷ್ಟವಾಗಲ್ಲ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಈ ತರಹದ ಪ್ರಕರಣಗಳಲ್ಲಿ ಸಾರ್ವಜನಿಕರು ನೀಡುವ ಮಾಹಿತಿ ಬಹಳ ಮಹತ್ವದ್ದು. ಆದರೆ ಈ ಬಗ್ಗೆ ಯಾರೂ ನಮಗೆ ಮಾಹಿತಿ ನೀಡುತ್ತಿಲ್ಲ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಪ್ರಕರಣ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲು ತನಿಖಾ ತಂಡದ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ರೆಡ್ಡಿ ಹೇಳಿದ್ದಾರೆ.
ಕಳೆದ ವರ್ಷ ನವೆಂಬರ್ 19ರಂದು ಬೆಳಗ್ಗೆ ಕಾರ್ಪೋರೇಷನ್ ವೃತ್ತದಲ್ಲಿರುವ ಎಲ್‌ಐಸಿ ಕಚೇರಿ ಕಟ್ಟಡದ ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋಗಿದ್ದ ಕಾರ್ಪೋರೇಷನ್ ಬ್ಯಾಂಕ್ ವ್ಯವಸ್ಥಾಪಕಿ, ರಾಜರಾಜೇಶ್ವರಿ ನಗರ ನಿವಾಸಿ ಜ್ಯೋತಿ ಉದಯ್ ಮೇಲೆ ದುಷ್ಕರ್ಮಿ ಮಾರಕಾಸ್ತ್ರದಿಂದ ಹಲ್ಲೆ ಮಾಡಿ, ಹಣ ದೋಚಿ ಪರಾರಿಯಾಗಿದ್ದಾನೆ.