ಬೆಂಗಳೂರು: ನೈತಿಕ ಪೊಲೀಸ್ ಗಿರಿ ವಿರುದ್ಧ ನಗರದ ಟೌನ್ ಹಾಲ್ ಬಳಿ ನಡೆಸಲು ಉದ್ದೇಶಿಸಿರುವ 'ಕಿಸ್ ಆಫ್ ಲವ್'ನಲ್ಲಿ ಭಾಗವಹಿಸುವವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದೆ ಸಿಎಂ, 'ಕಿಸ್ ಆಫ್ ಲವ್'ನಲ್ಲಿ ಭಾಗವಹಿಸಿ, ಅಶ್ಲೀಲ ಮತ್ತು ಅಸಭ್ಯವಾಗಿ ವರ್ತಿಸುವವರ ವಿರುದ್ಧ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ನೈತಿಕ ಪೊಲೀಸ್ ಗಿರಿ ವಿರುದ್ಧ ಕಾನೂನು ಚೌಕಟ್ಟಿನಲ್ಲಿ ಪ್ರತಿಭಟನೆ ನಡೆಸಿದರೆ, ಅದಕ್ಕೆ ಸರ್ಕಾರದ ಅನುಮತಿ ಇದೆ. ಆದರೆ ಸಾರ್ವಜನಿಕವಾಗಿ ಬೀದಿಗಳಲ್ಲಿ ಕಿಸ್ ಡೇ ಆಚರಿಸುವ ಮೂಲಕ ಅಶ್ಲೀಲವಾಗಿ ಪ್ರತಿಭಟನೆ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಇನ್ನು ಮೇಕೆದಾಟು ಆಣೆಕಟ್ಟೆ ವಿರುದ್ಧ ಸುಪ್ರೀಂ ಮೆಟ್ಟಿಲೇರಿರುವ ತಮಿಳುನಾಡು ಸರ್ಕಾರದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಈ ಆಣೆಕಟ್ಟು ನಿರ್ಮಾಣದಿಂದ ತಮಿಳುನಾಡಿಗೆ ಪುರೈಸುವ ನೀರಿನ ಪ್ರಮಾಣದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಪೋಲಾಗುವ ಮತ್ತು ಹೆಚ್ಚುರಿಯಾಗಿ ಹರಿದು ಹೋಗುವ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ನಾವು ಆಣೆಕಟ್ಟೆ ಕಟ್ಟುತ್ತಿದ್ದೇವೆ ಮತ್ತು ಈ ಸಂಬಂಧ ಸರ್ಕಾರ ಕಾನೂನು ಹೋರಾಟ ನಡೆಸಲಿದೆ ಎಂದು ಹೇಳಿದರು.