ಕಟ್ಮಂಡು: ಕಟ್ಮಂಡುವಿನ ಕೇಂದ್ರ ಭಾಗದಲ್ಲಿ ಬೀರ್ ಆಸ್ಪತ್ರೆಯ ಪಕ್ಕದಲ್ಲಿ ಭಾರತದ ನೆರವಿನಿಂದ ಕಟ್ಟಲಾಗಿರುವ ತೀವ್ರ ನಿಗಾ ಘಟಕವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ನೇಪಾಳಕ್ಕೆ ವಹಿಸಿಕೊಡಲಿದ್ದಾರೆ.
ನವೆಂಬರ್ ೨೬ ಮತ್ತು ೨೭ರಂದು ನಡೆಯಲಿರುವ ೧೮ ನೆ ಸಾರ್ಕ್ ಶೃಂಗಸಭೆಯಲ್ಲಿ ಭಾಗವಹಿಸಲು ಮಂಗಳವಾರ ಕಟ್ಮಂಡುವಿಗೆ ಮೋದಿ ಬಂದಿಳಿಯಲಿದ್ದಾರೆ.
ಹಾಗೆಯೇ ಈ ನೇಪಾಳ ಪ್ರವಾಸದಲ್ಲಿ ಎಚ್ ಎ ಎಲ್ ಧ್ರುವ್ ಮಾರ್ಕ್ ೩ ಎಂಬ ಮುಂಚೂಣಿ ಲಘು ಹೆಲಿಕಾಪ್ಟರ್ ಒಂದನ್ನು ಕೊಡುಗೆ ನೀಡಲಿದ್ದಾರೆ.
ನೇಪಾಳಿ ಸೇನೆಯ ಪ್ರಕಾರ ಮೋದಿ ಅವರು ಹೆಲಿಕಾಪ್ಟರ್ ನ ಕೀಲಿಕೈಗಳನ್ನು ನೇಪಾಳ ಪ್ರಧಾನಿ ಸುಶೀಲ್ ಕೊಯಿರಾಲ ಅವರಿಗೆ ನೀಡಲಿದ್ದಾರೆ. ನೇಪಾಳದ ಸೇನಾಧ್ಯಕ್ಷ ಜನರಲ್ ಗೌರವ್ ಸುಮ್ಶೇರ್ ರಾಣ ಅವರು ಆ ಕೀಲಿಕೈಗಳನ್ನು ನೇಪಾಳದ ಪ್ರಧಾನಿಯಿಂದ ಪಡೆಯಲಿದ್ದಾರೆ.
ಎಚ್ ಎ ಎಲ್ ಸಂಸ್ಥೆ ಸಿದ್ಧಪಡಿಸಿರುವ ಈ ಹೆಲಿಕಾಪ್ಟರ್ ನನ್ನು ಕಡಿಮೆ ಬೆಲೆಯಲ್ಲಿ ಕೊಂಡುಕೊಳ್ಳುವ ಆಸಕ್ತಿಯನ್ನು ನೇಪಾಳ ತೋರಿತ್ತು. ಈ ಸಂಧಾನದ ಹಿನ್ನಲೆಯಲ್ಲೇ ಭಾರತ ಹೆಲಿಕಾಪ್ಟರ್ ಒಂದನ್ನು ಕೊಡುಗೆ ನೀಡುತ್ತಿದೆ.