ಪ್ರಧಾನ ಸುದ್ದಿ

ಕಪ್ಪು ಹಣ: ಕೇಂದ್ರದ ವಿರುದ್ಧ ಟಿಎಂಸಿ, ಜೆಡಿಯು ಪ್ರತಿಭಟನೆ

Lingaraj Badiger

ನವದೆಹಲಿ: ಸಂಸತ್‌ನ ಚಳಿಗಾಲದ ಅಧಿವೇಶನದ ಸೋಮವಾರ ಆರಂಭವಾಗಿದ್ದು, ಎರಡನೇ ದಿನವಾದ ಇಂದು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಹಲವು ವಿಘ್ನಗಳು ಎದುರಾಗಿವೆ. ಪ್ರಮುಖ ವಿಷಯಗಳಾದ ಕಪ್ಪುಹಣ, ಸಿಬಿಐ ಮುಖ್ಯಸ್ಥರ ನೇಮಕ, ವಿಮಾ ತಿದ್ದುಪಡಿ ಮಸೂದೆಗಳಿಗೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ಕಪ್ಪು ಹಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಜೆಡಿಯು ಸಂಸದರು, ಕಪ್ಪು ಹಣದ ಬಗ್ಗೆ ವಿಸ್ತೃತ ಚರ್ಚೆ ನಡೆಸಲು ರಾಜ್ಯ ಸಭೆಯಲ್ಲಿ ಪ್ರಶ್ನೋತ್ತರ ವೇಳೆಯನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿವೆ.

ಸಮಾಜವಾದಿ ಪಕ್ಷದ ಹಿರಿಯ ನಾಯಕರೊಬ್ಬರು ಪ್ರಶ್ನೋತ್ತರ ವೇಳೆ ರದ್ದು ಮಾಡದಿದ್ದರೆ, ಸಂಸತ್‌ನ ಉಭಯ ಸದನಗಳಲ್ಲಿ ಇತರೆ ಯಾವುದೇ ವಿಷಯದ ಚರ್ಚೆಗೂ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಇನ್ನು ಪ್ರಶ್ನೋತ್ತರ ವೇಳೆ ರದ್ದು ಮಾಡುವಂತೆ ಆಗ್ರಹಿಸಿ ಟಿಎಂಸಿ ಸಂಸದರು ಸಂಸತ್‌ನ ಹೊರಗಡೆ ಪ್ರತಿಭಟನೆ ಆರಂಭಿಸಿದ್ದಾರೆ. ಟಿಎಂಸಿ ನಾಯಕರು ಸಂಸತ್ ಪ್ರವೇಶಕ್ಕೆ ಅಡ್ಡಿಪಡಿಸಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.

100 ದಿನದಲ್ಲಿ ಕಪ್ಪು ಹಣವನ್ನು ವಾಪಸ್ ತರುತ್ತೇವೆ ಎಂದು ಮೋದಿ ಸರ್ಕಾರ ಪ್ರಮಾಣ ಮಾಡಿದೆ. ಆದರೆ 200 ದಿನ ಕಳೆದರೂ ಅದು ಸಾಧ್ಯವಾಗಿಲ್ಲ. ಹೀಗಾಗಿ ಅದಕ್ಕೆ ಈಗ ಉತ್ತರ ನೀಡಬೇಕು ಟಿಎಂಸಿ ನಾಯಕ ಸುಖೆಂದು ಶೇಖರ್ ಹೇಳಿದ್ದಾರೆ.

SCROLL FOR NEXT