ನವದೆಹಲಿ: ದಿನ ನೂರಾಯ್ತು, ತಿಂಗಳು ಆರಾಯ್ತು, ಎಲ್ಲಿ ಹೋಯ್ತು ಕಪ್ಪುಹಣ?
ಅದೇನು ಬಂತೇ ಅಥವಾ ಬರಲಿಲ್ಲವೇಯ ಉತ್ತರ ಕೊಡಿ... ಇದು ಸಂಸತ್‌ನ ಉಭಯ ಸದನಗಳಲ್ಲೂ ಮಂಗಳವಾರ ಕಂಡು ಬಂದ ದೃಶ್ಯ. ಕಪ್ಪುಹಣಕ್ಕೆ ಸಾಂಕೇತಿಕವಾಗಿ ಜತೆಗೊಂಡು ಕಪ್ಪು ಛತ್ರಿಯನ್ನೂ ಹೊತ್ತು ತಂದಿದ್ದ ಪ್ರತಿಪಕ್ಷಗಳ ಸದಸ್ಯರು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇದೇ ಮೊದಲ ಬಾರಿಗೆ ಆಕ್ರೋಶದಲ್ಲೂ ಒಗ್ಗಟ್ಟು ಪ್ರದರ್ಶಿಸಿದ್ದು ಪ್ರತಿಪಕ್ಷಗಳು.
ಮಂಗಳವಾರ ಸಂಸತ್‌ನ ಉಭಯ ಸದನಗಳೂ ಅಧಿಕೃತವಾಗಿ ಆರಂಭಗೊಂಡವು. ಕಪ್ಪುಗದ್ದಲ, ಸಿಬಿಐ ಮುಖ್ಯಸ್ಥರ ನೇಮಕ ಸಮಿತಿ ವಿವಾದ ಮತ್ತು ವಿಮಾ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಮಿತಿ ಹೆಚ್ಚಳ ಸಂಬಂಧ ಗದ್ದಲ ಮಾಡಬೇಕು ಎಂದು ಉದ್ದೇಶದೊಂದಿಗೇ ಸದನಕ್ಕೆ ಬಂದಿದ್ದ ಪ್ರತಿಪಕ್ಷಗಳ ಸದಸ್ಯರು ಸಮಯ ವ್ಯರ್ಥಗೊಳಿಸಲಿಲ್ಲ. ಅಷ್ಟೇನೂ ಬಿಸಿ ಏರದು ಎಂದು ಚಳಿಗಾಲದ ಅಧಿವೇಶನ ಆರಂಭಿಸಿದ್ದ ನರೇಂದ್ರ ಮೋದಿ ಸರ್ಕಾರಕ್ಕೆ ಸರಿಯಾಗಿಯೇ ಬಿಸಿ ಮುಟ್ಟಿಸಿದವು.
ಸಭಾತ್ಯಾಗ
ಮತ್ತೆ ಕಲಾಪ ಆರಂಭವಾದಾಗ ದೆಹಲಿ ಸ್ಪೆಷಲ್ ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್(ತಿದ್ದುಪಡಿ) ವಿಧೇಯಕದ ಕುರಿತು ಪ್ರತಿಪಕ್ಷಗಳಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಸಿಬಿಐ ನಿರ್ದೇಶಕರ ಆಯ್ಕೆಯಲ್ಲಿ ಪ್ರತಿಪಕ್ಷ ನಾಯಕನನ್ನು ಸಂಪೂರ್ಣ ಮೂಲೆಗುಂಪು ಮಾಡಲಾಗುತ್ತದೆ ಎಂದು ಆರೋಪಿಸಿ ಕಾಂಗ್ರೆಸ್ ಸೇರಿ ಬಹುತೇಕ ಪ್ರತಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು.