ಚಾಯ್‌ಬಾಸಾ (ಜಾರ್ಖಂಡ್): ಪ್ರಧಾನಿ ನರೇಂದ್ರ ಮೋದಿ ಅವರು ನಿರುದ್ಯೋಗಿಗಳಿಗೆ ಕೆಲಸ ಕೊಡುತ್ತೀನಿ ಅಂತ ಹೇಳಿದ್ದರು. ಆದರೆ ಅವರು ಕೆಲಸದ ಬದಲು ಎಲ್ಲರ ಕೈಗೂ ಪೊರಕೆ ಕೊಟ್ಟರು ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ "ಸ್ವಚ್ಛ ಭಾರತ್ ಅಭಿಯಾನ"ವನ್ನು ಲೇವಡಿ ಮಾಡಿದ್ದಾರೆ.
ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಮೋದಿ ತಾನೊಬ್ಬನೇ ಉದ್ಯೋಗ ಸೃಷ್ಟಿಸಬಲ್ಲೆ, ನಾನು ಒಬ್ಬನೇ ಕಾರ್ಖಾನೆಗಳನ್ನು, ರಸ್ತೆ, ವಿಮಾನ ನಿಲ್ದಾಣಗಳನ್ನು ನಿರ್ಮಿಸಬಲ್ಲೆ ಎಂದು ಹೇಳಿದ್ದರು. ಆದರೆ ಅಧಿಕಾರಕ್ಕೆ ಬಂದ ನಂತರ ಜನರ ಕೈಗೆ ಪೊರಕೆಯನ್ನು ಕೊಟ್ಟು ಆಸ್ಟ್ರೇಲಿಯಾಗೆ ಹೋಗಿ ಬಿಟ್ಟರು ಎಂದು ರಾಹುಲ್, ಮೋದಿ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ.
ಇಲ್ಲಿನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಮಾತನಾಡಿದ ರಾಹುಲ್, ಮೋದಿಯವರನ್ನು 10 ಉದ್ಯಮಿಗಳ ಪ್ರಧಾನಿ ಎಂದು ಕರೆದಿದ್ದು, ನಾವು ಅಭಿವೃದ್ಧಿಶೀಲ ಸರ್ಕಾರವನ್ನು ಬಯಸುತ್ತೇವೆಯೇ ವಿನಾ ಜಾಡಮಾಲಿಗಳ ಸರ್ಕಾರವನ್ನಲ್ಲ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷವು ಆರ್‌ಟಿಐ, ಎಂಜಿಎಮ್‌ಆರ್‌ಇಜಿಎ ಮತ್ತು ಭೂಸ್ವಾಧೀನ ಕಾಯ್ದೆಯ ಮೂಲಕ ಜನರನ್ನು ಸಬಲೀಕರಣ ಮಾಡಲು ಯತ್ನಿಸುತ್ತಿದೆ. ಮೋದಿಯವರು ಏಕಾಂಗಿಯಾಗಿ ಕಾರ್ಖಾನೆ, ರಸ್ತೆ ನಿರ್ಮಾಣ, ವಿಮಾನ ನಿಲ್ದಾಣಗಳನ್ನು ನಿರ್ಮಿಸುವುದಾದರೆ ಅವರು ಜನರ ಬೆಂಬಲವನ್ನು ಯಾಕೆ ಪಡೆಯಬೇಕು? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವ್ಯತ್ಯಾಸವೇನೆಂದರೆ ಕಾಂಗ್ರೆಸ್ ಎಲ್ಲ ವರ್ಗದ ಜನರನ್ನು ತಮ್ಮ ಜತೆಯಾಗಿ ಕೊಂಡೊಯ್ಯುತ್ತಿದೆ. ಅದೇ ವೇಳೆ ಬಿಜೆಪಿ (ಮೋದಿ) ಜನರಿಂದ ಅಧಿಕಾರವನ್ನು ಕಸಿದು ಒಬ್ಬರೇ ಪ್ರಭುತ್ವ ಮೆರೆಯುತ್ತಾರೆ ಎಂದು ರಾಹುಲ್ ತಮ್ಮ ಭಾಷಣದುದ್ದಕ್ಕೂ ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.