ಜಂಬೂ ಸವಾರಿಗೆ ಮೈಸೂರು ಸಜ್ಜು
ವಿಜಯದಶಮಿ ದಿನವಾದ ಶನಿವಾರ ನಡೆಯಲಿರುವ ಜಂಬೂ ಸಾವಿರಿಗೆ ಮೈಸೂರು ಸರ್ವ ಸನ್ನದ್ಧವಾಗಿದೆ.
ಮೈಸೂರು: ವಿಜಯದಶಮಿ ದಿನವಾದ ಶನಿವಾರ ನಡೆಯಲಿರುವ ಜಂಬೂ ಸಾವಿರಿಗೆ ಮೈಸೂರು ಸರ್ವ ಸನ್ನದ್ಧವಾಗಿದೆ. ಅರಮನೆ ಸಂಪ್ರದಾಯದಂತೆ ನವಮಿ-ದಶಮಿ ಎರಡೂ ಒಟ್ಟಿಗೆ ಬಂದಿದೆ. ಹೀಗಾಗಿ ಆಯುಧಪೂಜೆ ದಿನವೇ ವಿಜಯ ದಶಮಿ ಮೆರವಣಿಗೆ ನಡೆಯುತ್ತಿದೆ. ಆದರೆ, ಸರ್ಕಾರದವರು ಮಾತ್ರ ಎಂದಿನಂತೆ ಆಯುಧಪೂಜೆ ಮರುದಿನವಾದ ಅ.4ರಂದು ಮೆರವಣಿಗೆ ನಡೆಸುತ್ತಿದ್ದಾರೆ.
ಸಿಎಂ ಚಾಲನೆ: ನಾಳೆ ಮಧ್ಯಾಹ್ನ 1.01ರಿಂದ 1.31ಗಂಟೆಯೊಳಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೂಜೆ ಸಲ್ಲಿಸುವರು. ನಂತರ ಅರಮನೆಯ ಒಳಾವರಣದ ವಿಶೇಷ ವೇದಿಕೆಯಲ್ಲಿ ನಿಂತು ಗಜರಾಜ ಅರ್ಜುನ ಹೊರಲಿರುವ 750 ಕೆ.ಜೆ. ತೂಕದ ಚಿನ್ನದ ಅಂಬಾರಿಯಲ್ಲಿರುವ ಶ್ರೀ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ಇದೇ ವೇಳೆ ಮೆರವಣಿಗೆಗೆ 8000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಅದೇ ದಿನ ಸಂಜೆ 7ಕ್ಕೆ ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯತಿನಲ್ಲಿ ರಾಜ್ಯಪಾಲ ವಜುಭಾಯಿ ರುಡಾಭಾಯಿ ವಾಲಾ ಅವರು ಭಾಗವಹಿಸಲಿದ್ದಾರೆ.