ಹಿಂದುತ್ವ ದೇಶದ ಗುರುತು: ಭಾಗ್ವತ್
ದಸರಾ ಹಬ್ಬದ ಪ್ರಯುಕ್ತ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು ಮಾಡಿದ...
ನಾಗ್ಪುರ: ದಸರಾ ಹಬ್ಬದ ಪ್ರಯುಕ್ತ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು ಮಾಡಿದ ಭಾಷಣವನ್ನು ದೂರದರ್ಶನದಲ್ಲಿ ನೇರಪ್ರಸಾರ ಮಾಡಿದ್ದು ವಿವಾದಕ್ಕೀಡಾಗಿದೆ. ಈ ಬಗ್ಗೆ ಶನಿವಾರ ಪ್ರತಿಕ್ರಿಯಿಸಿದ ಭಾಗ್ವತ್ ಹಿಂದುತ್ವ ಎಂಬುದು ದೇಶದ ಗುರುತು ಮತ್ತು ಅದು ವೈವಿಧ್ಯತೆಯಲ್ಲಿ ಏಕತೆಯನ್ನು ಬೆಸೆಯುವ ಕೊಂಡಿ ಎಂದು ಹೇಳಿದ್ದಾರೆ.
ಆರೆಸ್ಸೆಸ್ಸ್‌ನ 89ನೇ ಸಂಸ್ಥಾಪನಾ ದಿನ ಹಾಗು ದಸರಾ ಹಬ್ಬ ಒಂದೇ ದಿನ ನಡೆಯುತ್ತಿದ್ದು, ಈ ಆಚರಣೆಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗ್ವತ್ ಮೋದಿಯವರು ನಾಲ್ಕು ತಿಂಗಳಲ್ಲಿಯೇ ದೇಶದ ಸುರಕ್ಷೆ, ಆರ್ಥಿಕತೆ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ಬಗ್ಗೆ ಉತ್ತಮ ನಡೆ ಸ್ವೀಕರಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಭಾಗ್ವತ್ ಅವರ ಭಾಷಣವನ್ನು ನೇರ ಪ್ರಸಾರ ಮಾಡಿದ್ದಕ್ಕಾಗಿ ಕಾಂಗ್ರೆಸ್ ಮತ್ತು ಸಿಪಿಎಂ ಆಕ್ಷೇಪ ವ್ಯಕ್ತಪಡಿಸಿದ್ದು, ಬಿಜೆಪಿ ಸರ್ಕಾರ ಅಧಿಕಾರವನ್ನು ದುರುಪಯೋಗ ಪಡಿಸುತ್ತಿದೆ ಎಂದು ದೂರಿದೆ.
ಅದೇ ವೇಳೆ ಭಾಗ್ವತ್ ಅವರಿಗೆ ಬೆಂಬಲ ಸೂಚಿಸಿದ ಪ್ರಧಾನಿ ಮೋದಿ, ಭಾಗ್ವತ್ ಅವರು ಹೇಳಿದ ಮಾತುಗಳು ಪ್ರಸ್ತುತ ದೇಶದ ಪರಿಸ್ಥಿತಿಗೆ ಸಂಗತವಾದುದು ಎಂದಿದ್ದಾರೆ.