ಮಾರಿಬಿಟ್ಟ ಮಾನ ಮರ್ಯಾದೆಯ!
ಆನ್ಲೈನ್ನಲ್ಲಿ ಗೀಜಗನ ಗೂಡು ಮಾರಾಟಕ್ಕಿಟ್ಟ, ಸೆರೆಮನೆ ಸೇರಿಬಿಟ್ಟ
ಬೆಂಗಳೂರು: ಒಎಲ್ಎಕ್ಸ್ ಇಲ್ಲಿ ಎಲ್ಲವನ್ನೂ ಮಾರಬಹುದು, ಕೊನೆಗೆ ಮಾನ ಮರ್ಯಾದೆಯನ್ನೂ?!
ಈ ಕುರಿತಂತೆ ಹಲವು ಜೋಕುಗಳು ಹರಿದಾಡುತ್ತಿವೆ. ಆದರೆ, ಈಗ ಹೇಳಹೊರಟಿರುವುದು ಜೋಕಲ್ಲ, ನೈಜ ಘಟನೆ. ಒಎಲ್ಎಕ್ಸ್ ಕಂಪನಿಯ ಜಾಹೀರಾತಿನ ಸಾಲನ್ನು ನಿಜ ಮಾಡುವಂತೆ ಅಲ್ಲಿ ಗೀಜಗನ ಗೂಡುಗಳೂ ಮಾರಟಕ್ಕಿದ್ದವು! ಗೂಡುಗಳು ಒಳ್ಳೆಯ ಬೆಲೆಗೆ ಮಾರಾಟವಾದವೋ ಇಲ್ಲವೋ ಗೊತ್ತಿಲ್ಲ. ಆದರೆ, ಹೀಗೆ ಗೂಡುಗಳನ್ನು ಮಾರಾಟಕ್ಕಿಟ್ಟಿದ್ದ ಬೆಂಗಳೂರಿನ ಯುವಕ ಮಾತ್ರ ಪೊಲೀಸ್ ಠಾಣೆಯ ಗೂಡು ಸೇರಿದ್ದಾನೆ.
ಸೆಕೆಂಡ್ ಹ್ಯಾಂಡ್ ವಸ್ತುಗಳ ಆನ್ಲೈನ್ ಮಾರಾಟ ಜಾಲತಾಣ ಒಎಲ್ಎಕ್ಸ್ನಲ್ಲಿ ಚಿಕ್ಕಮಗಳೂರು ಮೂಲದ ಗಗನ್(24) ಗೀಜಗ ಹಕ್ಕಿಯ ಗೂಡುಗಳನ್ನು(ಗೀಜಗನ ಗೂಡು) ಮಾರಾಟಕ್ಕಿಟ್ಟಿದ್ದ. ಇದಕ್ಕೂ ಮಾರುಕಟ್ಟೆಯಿದೆ ಎಂಬುದನ್ನು ಗುರುತಿಸಿದ್ದು ಆತನ ಜಾಣತನವಾದರೆ, ಕಾನೂನು ಬಾಹಿರ ಕೆಲಸ ಮಾಡಿರುವುದು ಮೂರ್ಖತನ. ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಗಗನ್, ಏಪ್ರಿಲ್ ತಿಂಗಳಲ್ಲಿ ಈ ಬಗ್ಗೆ ಒಎಲ್ಎಕ್ಸ್ನಲ್ಲಿ ಜಾಹೀರಾತು ಹಾಕಿದ್ದ. ಇದನ್ನು ಗಮನಿಸಿದ ಸ್ವಯಂ ಸೇವಕರು, ಬಿಬಿಎಂಪಿ ಅರಣ್ಯ ಘಟಕದ ವಾರ್ಡನ್ ಶರತ್ ಅವರಿಗೆ ಮಾಹಿತಿ ನೀಡಿದ್ದರು.
ಜಾಹೀರಾತು ಗಮನಿಸಿದ ಶರತ್, ಗ್ರಾಹಕರಂತೆ ಗಗನ್ಗೆ ಇ ಮೇಲ್ ಕಳುಹಿಸಿದರು. ಆರೋಪಿ(ಅ.2) ಗುರುವಾರ 42 ಗೂಡುಗಳನ್ನು ತೆಗೆದುಕೊಂಡು ಕಬ್ಬನ್ಪಾರ್ಕ್ ಸಮೀಪದ ಕ್ವೀನ್ಸ್ ಸ್ಟ್ಯಾಚ್ಯೂ ವೃತ್ತದ ಬಳಿ ಬಂದಿದ್ದ. ಈ ವೇಳೆ ಬಿಬಿಎಂಪಿ ಅರಣ್ಯ ಘಟಕದ ವಾರ್ಡನ್ಗಳು, ಕಬ್ಬನ್ಪಾರ್ಕ್ ಪೊಲೀಸರು ಜಂಟಿ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಗಗನ್ ವಿರುದ್ಧ ವನ್ಯಜೀವಿ ಸಂರಕ್ಷಣೆ ಕಾಯ್ದೆ ಹಾಗೂ ಐಪಿಸಿ ಕಲಂ 379 ಅನ್ವಯ ಎಫ್ಐಆರ್ ದಾಖಲಿಸಿರುವ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಸದ್ಯ ಆರೋಪಿ ನ್ಯಾಯಾಂಗ ವಶದಲ್ಲಿದ್ದಾನೆ.
ಏನನ್ನುತ್ತೆ ವನ್ಯಜೀವಿ ಸಂರಕ್ಷಣೆ ಕಾಯ್ದೆ?
ವನ್ಯಜೀವಿ ಎಂದು ಗುರುತಿಸಲ್ಪಡುವ ಯಾವುದೇ ಹಕ್ಕಿಯನ್ನು ಗಾಯಗೊಳಿಸುವುದು, ನಾಶಪಡಿಸುವುದು, ಪಕ್ಷಿಯ ಯಾವುದೇ ಭಾಗವನ್ನು ಕಿತ್ತುಕೊಳ್ಳುವುದು, ಹಕ್ಕಿಯ ಮೊಟ್ಟೆಗಳನ್ನು ಕದಿಯುವುದು, ಮೊಟ್ಟೆ ಅಥವಾ ಗೂಡನ್ನು ನಾಶಪಡಿಸುವುದು ಶಿಕ್ಷಾರ್ಹ ಅಪರಾಧ.