ಮಾತಾಡುತ್ತೆ ಮೌನಿಯ ಲೇಖನಿ: ಬಿಚ್ಚಿಡುತ್ತೆ ನಿಜ ಕಹಾನಿ!
ಯಾಕೋ ಏನೋ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‌ಗೆ ಪುಸ್ತಕ ಮುಜುಗರ ತಪ್ಪುವಂತೆ ಕಾಣುತ್ತಿಲ್ಲ...
ನವದೆಹಲಿ: ಯಾಕೋ ಏನೋ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‌ಗೆ ಪುಸ್ತಕ ಮುಜುಗರ ತಪ್ಪುವಂತೆ ಕಾಣುತ್ತಿಲ್ಲ. ಶೀಘ್ರವೇ ಅದಕ್ಕೊಂದು ಸೇರ್ಪಡೆಯಾಗಲಿದೆ. ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ತಮ್ಮ ಅಧಿಕಾರದ ಅವಧಿಯಲ್ಲಿ ಏನಾಗಿತ್ತು ಎನ್ನುವುದರ ನೈಜ ಚಿತ್ರಣವನ್ನು ದೇಶದ ಮುಂದಿಡಲಿದ್ದಾರಂತೆ!
ಡಾ. ಸಿಂಗ್ 2008ರಿಂದಲೇ ಅದಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿ ಬರೆಯುತ್ತಿದ್ದರಾದರೂ, ಇತ್ತೀಚಿನ ದಿನಗಳಲ್ಲಿ ಅದರ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಈ ಮೂಲಕ ಅವರು ಪ್ರಮುಖ ಹಗರಣಗಳಿಗೆ ಸಂಬಂಧಿಸಿದಂತೆ ಇರುವ ದೀರ್ಘ ಮೌನವನ್ನು ಮುರಿಯುವ ಸಾಧ್ಯತೆ ಇದೆ!. ಎಲ್ಲದಕ್ಕಿಂತ ಹೆಚ್ಚಾಗಿ ಡಾ. ಸಿಂಗ್ ಹಿಂದಿನಂತೆ ಮಹಾಮೌನಿಯಾಗಿಲ್ಲ ಎಂಬುದು ವಿಶೇಷ. ಅವರೀಗ ಹೋರಾಟಗಾರನ ನಿಲುವನ್ನು ಹೊಂದಿದ್ದಾರೆಂಬುದು ಸಮೀಪವರ್ತಿಗಳ ಅಂಬೋಣ.
ದುರ್ಬಲ ಪ್ರಧಾನಿ ಎಂಬ ಲೇವಡಿಯನ್ನು ಹತ್ತು ವರ್ಷಗಳಲ್ಲಿ ಕೇಳಿಸಿಕೊಂಡೇ ಅಧಿಕಾರ ನಡೆಸಿದ್ದ ಡಾ.ಸಿಂಗ್ , ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನಿ ಕಚೇರಿ ನಡುವೆ ಯಾವ ವಿಚಾರಗಳ ಬಗ್ಗೆ ಮಾಹಿತಿ ವಿನಿಮಯ ಮತ್ತು ಪತ್ರ ವ್ಯವಹಾರ ನಡೆದಿತ್ತು ಎಂಬ ಬಗ್ಗೆ ಪುಸ್ತಕದಲ್ಲಿ ಮಾಜಿ ಪ್ರಧಾನಿ ಉಲ್ಲೇಖಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೋರಾಟಗಾರರು: ಮಾಜಿ ಪ್ರಧಾನಿ ಆಪ್ತರೊಬ್ಬರ ಪ್ರಕಾರ ಮನಮೋಹನ್ ಸಿಂಗ್ ಹಿಂದಿನಂತೆ ಮೌನಿಯಾಗಿ ಉಳಿದಿಲ್ಲ. ಅವರ ಮನಸ್ಸಿನಲ್ಲೀಗ ಹೋರಾಟಗಾರನ ಮನೋಭಾವ ಮೂಡಿದೆ. ಅದರಲ್ಲೂ ವಿಶೇಷವಾಗಿ ಮಹಾಲೇಖಪಾಲ ವಿನೋದ್ ರಾಯ್‌ರಿಂದ 2 ಜಿ ಮತ್ತು ಕಲ್ಲಿದ್ದಲು ಹಗರಣದ ಬಗ್ಗೆ ಕಟುವಾಗಿ ಟೀಕೆಗೆ ಒಳಗಾದ ಬಳಿಕ ಕೋಪಾವಿಷ್ಟರಾಗಿದ್ದಾರೆ. ಹೀಗಾಗಿ ಯುಪಿಎ ಎರಡನೇ ಅವಧಿಯಲ್ಲಿ ತಾವು ಕೈಗೊಂಡ ಎಲ್ಲ ನಿರ್ಧಾರಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ವಿಶೇಷವಾಗಿ ಕಲ್ಲಿದ್ದಲು ಮತ್ತು 2ಜಿ ವಿಚಾರಗಳಿಗೆ ಪ್ರಮುಖ ಸಚಿವಾಲಯಗಳ ಜತೆ ನಡೆಸಿರುವ ಪತ್ರ ವ್ಯವಹಾರಗಳ ಬಗ್ಗೆ ವಿವರಣೆ ಪಡೆದುಕೊಂಡಿದ್ದಾರೆ.
ಟಿಪ್ಸ್ ಪಡ್ಕೊಂಡ್ರು
ಯುಪಿಎ ಸರ್ಕಾರದ ಬಗ್ಗೆ ತೀರಾ ಇತ್ತೀಚೆಗೆ ಬಿಡುಗಡೆಯಾದ ಪುಸ್ತಕವೆಂದರೆ ಕೇಂದ್ರದ ಮಾಜಿ ಸಚಿವ ಕೆ.ನಟವರ್ ಸಿಂಗ್ ಬರೆದ ಒನ್ ಲೈಫ್ ಈಸ್ ನಾಟ್ ಇನಫ್ ಪುಸ್ತಕ ಕಾಂಗ್ರೆಸ್‌ಗೆ ಮುಜುಗರ ತಂದಿತ್ತು. ಜತೆಗೆ ಯುಪಿಎ ಸರ್ಕಾರದ ಬಗ್ಗೆ ಟೀಕೆಯನ್ನೂ ವ್ಯಕ್ತಪಡಿಸಲಾಗಿತ್ತು. ಇದೀಗ ಮನಮೋಹನ್ ಸಿಂಗ್ ಕೂಡಾ ನಟವರ್ ಸಿಂಗ್ ಜತೆಗೆ ಪುಸ್ತಕ ಬರೆಯುವ ಬಗ್ಗೆ ಚರ್ಚಿಸಿದ್ದಾರೆ. 2013ರಲ್ಲಿ ಅಮೆರಿಕ ಪ್ರವಾಸದಿಂದ ಹಿಂದಿರುಗಿದ್ದ ಮಾಜಿ ಪ್ರಧಾನಿ ತಮ್ಮ ಆಪ್ತರೊಬ್ಬರ ಕೈಗೆ ಪುಸ್ತಕ ಬರೆಯಲು ಬೇಕಾಗಿದ್ದ ದಾಖಲೆಗಳನ್ನು ಮತ್ತು ಮಾಹಿತಿಗಳನ್ನು ನೀಡಿದ್ದಾರೆ. ಅವರು ಅದನ್ನು ಮರು ಖಚಿತಪಡಿಸಿಕೊಂಡು ಸಿಂಗ್ ಅವರಿಗೆ ನೀಡುತ್ತಿದ್ದರು. ಅಮೆರಿಕ ಜತೆಗೆ ನಾಗರಿಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿದ ತಕ್ಷಣವೇ ಪಕ್ಷದ ಅಧ್ಯಕ್ಷರು ಮತ್ತು ತಮ್ಮ ನಡುವಿನ ಸಂಬಂಧದ ಬಗ್ಗೆ ಪುಸ್ತಕ ಬರೆಯಲು ಮುಂದಾಗಿದ್ದಾರೆ ಎನ್ನುತ್ತವೆ ಮೂಲಗಳು.
ವೆಬ್ ಸೈಟಲ್ಲಿ
ಪತ್ರ ವ್ಯವಹಾರಗಳಿಗೆ ಸಂೂಂಧಿಸಿದ ಎಲ್ಲ ಮಾಹಿತಿಗಳನ್ನು ವೆಬ್‌ಸೈಟ್ ಮೂಲಕವೂ ಸಾರ್ವಜನಿಕವಾಗಿ ಪ್ರಕಟಿಸಲು ಮಾಜಿ ಪ್ರಧಾನಿ ಮುಂದಾಗಿದ್ದಾರೆ. ಇದಕ್ಕಾಗಿ ತಾಂತ್ರಿಕ ಸಲಹೆಯನ್ನೂ ಅವರು ಕೇಳಿದ್ದಾರೆ ಎನ್ನುವುದು ದೆಹಲಿಯ ಉನ್ನತ ಮಟ್ಟದಲ್ಲಿ ಓಡಾಡುತ್ತಿರುವ ಗುಸುಗುಸು