ಜಯಲಲಿತಾ ಜಾಮೀನು ಅರ್ಜಿ ವಜಾ
ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಸಲ್ಲಿಸಿದ್ದ...
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಜಯಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯಪೀಠ, ತಮಿಳುನಾಡು ಮಾಜಿ ಮುಖ್ಯಮಂತ್ರಿಗೆ ಜಾಮೀನು ನೀಡಲು ನಿರಾಕರಿಸಿದೆ.
ಸಿಬಿಐ ಕೋರ್ಟ್ ತೀರ್ಪಿನ ತಡೆ ಬಗ್ಗೆ ನಿರ್ಧರಿಸಲು ಕಾಲಾವಕಾಶಬೇಕಾಗಿರುವುದರಿಂದ ಸದ್ಯ ಜಾಮೀನಿಗಾಗಿ ವಾದ ಮಂಡಿಸಿದ್ದ ಜೇಠ್ಮಲಾನಿ, ಮೇಲ್ಮನವಿ ವಿಚಾರಣೆ ಶೀಘ್ರವೇ ಇತ್ಯರ್ಥವಾಗಬೇಕು. ಮೇಲ್ಮನವಿ ಶೀಘ್ರ ಇತ್ಯರ್ಥವಾಗದಿದ್ದರೆ ಅಪರಾಧಿಯನ್ನು ಜೈಲಿನಲ್ಲಿಡಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಹೀಗಾಗಿ ಜಯಲಲಿತಾಗೆ ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಆದರೆ ಮನವಿಯನ್ನು ತಳ್ಳಿಹಾಕಿದ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಅವರು, ಇದು ಭ್ರಷ್ಟಾಚಾರ ಪ್ರಕರಣವಾಗಿದ್ದರಿಂದ ಜಾಮೀನು ನೀಡಲು ಬರುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಜಯಲಲಿತಾ ಅವರಿಗೆ 4 ವರ್ಷ ಜೈಲು ಶಿಕ್ಷೆ ಹಾಗೂ 100 ಕೋಟಿ ರುಪಾಯಿ ದಂಡ ವಿಧಿಸಿದ್ದ ಸಿಬಿಐ ವಿಶೇಷ ಕೋರ್ಟ್ನ ತೀರ್ಪನ್ನು ಅಮಾನತ್ತಿನಲ್ಲಿಡಲು ಕೋರ್ಟ್ ನಿರಾಕರಿಸಿದೆ.
ವಾದ ಮಂಡನೆ ವೇಳೆ ಗದ್ದಲ
ಹೈಕೋರ್ಟ್ನ ಏಕಸದಸ್ಯ ಪೀಠದಲ್ಲಿ ಜಯಲಲಿತಾರ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದ್ದವೇಳೆ ಜಯಾ ಪರ ಬೆಂಬಲಿಗರು ಗದ್ದಲವೆಬ್ಬಿಸಿದರು. ಇದರಿಂದಾಗಿ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಅವರು ಗದ್ದಲ ಮಾಡುತ್ತಿರುವವರಿಗೆ ಸುಮ್ಮನಿರುವಂತೆ ಸೂಚಿಸಿದರು.
ಜಯಲಲಿತಾ ಜೈಲು ಸೇರಿದ್ದರಿಂದ ಅವರ ಸಾವಿರಾರು ಅಭಿಮಾನಿಗಳು ಹಾಗೂ ಎಐಎಡಿಎಂಕೆ ಕಾರ್ಯಕರ್ತರು ಪರಪ್ಪನ ಅಗ್ರಹಾರದ ಸುತ್ತಮುತ್ತ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಯಾವುದೇ ಅನಾಹುತಗಳು ಸಂಭವಿಸದಂತೆ ನೋಡಿಕೊಳ್ಳುವ ಸಲುವಾಗಿ ಸೆಂಟ್ರಲ್ ಜೈಲು ಸುತ್ತಮುತ್ತ ಸೆಕ್ಷನ್ 144 ಜಾರಿ ಮಾಡಲಾಗಿದೆ.
ಜಯಲಲಿತಾರಿಗೆ ಜಾಮೀನು ಸಿಗದೆ ಹೋದರೆ ಹಾಗ ಪರಿಸ್ಥಿತಿಯನ್ನು ನಿಯಂತ್ರಿಸಲು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಪ್ರತಿಭಟನೆ ನಡೆಸಿದವರ ಬಂಧನಕ್ಕಾಗಿ ಸೆಂಟ್ರಲ್ ಜೈಲಿನ ಬಳಿ 10 ಬಿಎಂಟಿಸಿ ಬಸ್ಗಳನ್ನು ನಿಲ್ಲಿಸಲಾಗಿದೆ.
ಜಯಲಲಿತಾ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ರಜಾ ಕಾಲದ ನ್ಯಾಯಪೀಠ ಮಂಗಳವಾರಕ್ಕೆ ಮುಂದೂಡಿತ್ತು. ವಿಚಾರಣೆ ಮಂಗಳವಾರ ಮುಂದುವರಿಯುವ ಹಿನ್ನೆಲೆಯಲ್ಲಿ ಜಯಾ ಬೆಂಬಲಿಗರು ಭಾರಿ ಸಂಖ್ಯೆಯಲ್ಲಿ ಸೇರಿ ಪ್ರತಿಭಟನೆ ನಡೆಸುವ ತಯಾರಿ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ವಿಧಾನಸೌಧ ಮತ್ತು ಸುತ್ತಮುತ್ತಲ ಸರಕಾರಿ ಕಚೇರಿಗಳ ಕೆಲಸ ಕಾರ್ಯಕ್ಕೆ ಹಾಗೂ ನ್ಯಾಯಾಲಯದ ಕಲಾಪಕ್ಕೆ ಅಡ್ಡಿ ಉಂಟಾಗುವುದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಎಂ.ಎನ್.ರೆಡ್ಡಿ ತಿಳಿಸಿದ್ದಾರೆ.
ಪೊಲೀಸ್ ಭದ್ರತೆ
ಹೈಕೋರ್ಟ್ ಹಾಗೂ ಸೆಂಟ್ರಲ್ ಜೈಲು ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಸೆಂಟ್ರಲ್ ಜೈಲಿನ ಸುತ್ತಮುತ್ತ 3 ಹಂತಗಳಲ್ಲಿ ವಿಶೇಷ ಭದ್ರತೆ ನಿಯೋಜಿಸಲಾಗಿದೆ. 15 ಸಿಎಆರ್ ತುಕಡಿ, 1500 ಪೇದೆಗಳು, 200 ಹೋಮ್ಗಾರ್ಡ್ಸ್, 15 ಕೆಎಸ್ಆರ್ಪಿ ತುಕಡಿ, 30 ಇನ್ಸ್ಪೆಕ್ಟರ್ಗಳು, 60 ಸಬ್ ಇನ್ಸ್ಪೆಕ್ಟರ್ಗಳು, ವಿಶೇಷ ಭದ್ರತೆಗಾಗಿ 4 ಡಿಸಿಪಿಗಳು, 12 ಎಸಿಪಿಗಳು, 150 ಪೇದೆಗಳು, 5 ಸಿಎಆರ್ ತುಕಡಿ, ಮೂವರು ಡಿಸಿಪಿಗಳು, 10 ಎಸಿಪಿಗಳು, 20 ಇನ್ಸ್ಪೆಕ್ಟರ್ಗಳು, 5 ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.