ಜಯಾ ತಾವೇ ಹೆಣೆದ ಬಲೆಗೆ ಬಿದ್ದರು: ಕರುಣಾನಿಧಿ
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ...
ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿ ಪ್ರತಿಕ್ರಿಯಿಸಿರುವ ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಅವರು, ಜಯಲಲಿತಾ ತಾವು ಹೆಣೆದ ಬಲೆಗೆ ತಾವೇ ಬಿದ್ದಿದ್ದು, ಇನ್ನು ಅವರು ಮತ್ತೆ ಅಧಿಕಾರಕ್ಕೆ ಬರುತ್ತಾರೆ ಎನ್ನುವುದು ಕನಸು ಎಂದು ಹೇಳಿದ್ದಾರೆ.
ಕರ್ನಾಟಕ ಹೈಕೋರ್ಟ್ ಸೆ.27 ರಂದು ಜಯಾ ಅಕ್ರಮ ಆಸ್ತಿಗಳಿ ಪ್ರಕರಣದ ತೀರ್ಪು ನೀಡಿದ್ದಾಗಿನಿಂದಲೂ ಯಾವುದೇ ಪ್ರತಿಕ್ರಿಯೆ ನೀಡದ ಕರುಣಾನಿಧಿ ಇಂದು ತಮ್ಮ ಮೌನ ಮುರಿದಿದ್ದು, ಜಯಲಲಿತಾ ತಾವೇ ಬೀಸಿದ ಬಲೆ ಬಿದ್ದಿದ್ದು, ಮುಂದೆ ಅಧಿಕಾರಕ್ಕೆ ಬರುವುದು ಕನಸಿನ ಮಾತು ಎಂದಿದ್ದಾರೆ.
ಜಯಲಲಿತಾ ಅವರು ಜೈಲು ಸೇರುವ ಮೂಲಕ ತಮ್ಮ ಪತನಕ್ಕೆ ತಾವೇ ಕಾರಣರಾಗಿದ್ದು, ಈ ಪತನವೇ ಅವರ ಜೀವನದ ಪಾಠವಾಗಲಿದೆ ಎಂದು ಕರುಣಾ ತಿಳಿಸಿದ್ದಾರೆ.
ಜಯಲಲಿತಾ ಪ್ರಕರಣ ದೇಶದಾದ್ಯಂತ ಸುದ್ದಿಯಾಗುತ್ತಿದ್ದರೂ ಕರುಣಾನಿಧಿ ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಹಿಸಿದ್ದದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತಲ್ಲದೆ, ಈ ಮೌನಕ್ಕೆ ಕರುಣಾನಿಧಿ ಅವರ ಕುಟುಂಬಸ್ಥರೇ ಭ್ರಷ್ಟಚಾರದಲ್ಲಿ ತೊಡಗಿರುವುದರಿಂದ ಪ್ರತಿಕ್ರಿಯೆ ನೀಡಲು ದೂರ ಸರಿಯುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇಂತಹ ಅನುಮಾನಗಳಿಗೆ ಇಂದು ಕರುಣಾನಿಧಿ ತೆರೆ ಎಳೆದಿದ್ದಾರೆ.