ಯುದ್ಧ ಸನ್ನದ್ಧ ಗಡಿ
ಪಾಕ್ ಸೇನೆಯ ಅಪ್ರಚೋದಿತ ದಾಳಿಯಿಂದಾಗಿ ಕಾಶ್ಮೀರ ಕಣಿವೆಯಲ್ಲೀಗ ಮಿನಿ ಯುದ್ಧದ ಸ್ಥಿತಿ...
ನವದೆಹಲಿ: ಪಾಕ್ ಸೇನೆಯ ಅಪ್ರಚೋದಿತ ದಾಳಿಯಿಂದಾಗಿ ಕಾಶ್ಮೀರ ಕಣಿವೆಯಲ್ಲೀಗ ಮಿನಿ ಯುದ್ಧದ ಸ್ಥಿತಿ. ಗಡಿಗ್ರಾಮಗಳನ್ನು ಗುರಿಯಾಗಿಸಿಕೊಂಡು ಅಂತಾರಾಷ್ಟ್ರೀಯ ಗಡಿಯುದ್ಧಕ್ಕೂ ಮುಂದುವರಿದ ಶೆಲ್ ಮತ್ತು ಗುಂಡಿನ ದಾಳಿಗೆ ಬುಧವಾರ ಮತ್ತೆ ಮೂವರು ನಾಗರಿಕರು ಮೃತಪಟ್ಟರು. ಯೋಧರು ಸೇರಿ 12 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಮೂಲಕ ಕಳೆದೊಂದು ವಾರದಿಂದ ಪಾಕ್ ದಾಳಿಗೆ 9 ಭಾರತೀಯರು ಮೃತಪಟ್ಟಂತಾಗಿದೆ.
ಪಾಕ್ ದುಸ್ಸಾಹಸಕ್ಕೆ ಭಾರತ ಸೇನೆ ಕೂಡ ತಕ್ಕ ಉತ್ತರ ನೀಡುತ್ತಿದೆ. ಭಾರತದ ದಾಳಿಗೆ ಪಾಕಿಸ್ತಾನದಲ್ಲೂ ಭಾರಿ ಸಾವುಸ ನೋವುಗಳಾಗಿವೆ. ಪ್ರಧಾನಿ ನರೇಂದ್ರ ಮೋದಿ ಕೂಡ ಈ ಬಾರಿ ಪಾಕ್ನ ಒತ್ತಡ ತಂತ್ರಕ್ಕೆ ಮಣಿಯದಿರಲು ನಿರ್ಧರಿಸಿದ್ದಾರೆ. 'ಶಾಂತಿಯ ಪಾಠ ಅರ್ಥವಾಗದವರಿಗೆ ಗುಂಡಿನ ಮೂಲಕವೇ ಸೂಕ್ತ ಪಾಠ ಕಲಿಸಿ. ಕದನ ವಿರಾಮ ಉಲ್ಲಂಘನೆ ನಿಲ್ಲುವವರೆಗೆ ಪಾಕ್ ಸೇನೆ ಜತೆ ಮಾತುಕತೆ ನಡೆಸಬೇಡಿ' ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ಗೆ ಸ್ಪಷ್ಟವಾಗಿ ಸೂಚಿಸಿದ್ದಾರೆ. ಜತೆಗೆ, ಗಡಿಯಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಪಾಕ್ ಜತೆಗೆ ವ್ಯವಹರಿಸಲು ಸೇನೆಗೂ ಮುಕ್ತ ಅಧಿಕಾರ ನೀಡಿದ್ದಾರೆ.
ಹತಾಶೆಯಿಂದ ದಾಳಿ
ಗಡಿಯ ರಕ್ಷಣೆಗೆ ನಿಂತಿರುವ ಬಿಎಸ್ಎಫ್ ಯೋಧರಿಗೆ ಹಾನಿ ಮಾಡಲು ಪಾಕ್ ಸೇನೆಗೆ ಸಾಧ್ಯವಾಗಿಲ್ಲ. ಇದರಿಂದ ಹತಾಶೆಗೊಳಗಾಗಿ ಅವರು ನಾಗರಿಕರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಪಾಕ್ ಪ್ರಚೋದನೆಗೆ ಬಿಎಸ್ಎಫ್ ಯೋಧರು ಕೂಡ ತಕ್ಕ ಉತ್ತರ ನೀಡುತ್ತಿದ್ದಾರೆ ಎಂದು ಬಿಎಸ್ಎಫ್ನ ಮಹಾ ನಿರ್ದೇಶಕ ಡಿ.ಕೆ ಪಾಠಕ್ ಅಭಿಪ್ರಾಯಪಟ್ಟಿದ್ದಾರೆ.
ಪ್ರತ್ಯುತ್ತರಕ್ಕೆ 15 ಪಾಕಿಗಳ ಸಾವು
ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಇರುವ ಪಾಕ್ ಸೇನೆಯ 37 ಔಟ್ಪೋಸ್ಟ್ಗಳ ಮೇಲೆ ಭಾರತ ಭಾರಿ ಗುಂಡಿನ ದಾಳಿ ನಡೆಸಿದೆ. ಇದರಿಂದಾಗಿ ಮಂಗಳವಾರದವರೆಗೆ ಪಾಕಿಸ್ತಾನದಲ್ಲಿ 15 ಮಂದಿ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
9 ಮಂದಿ ಪಾಕಿಸ್ತಾನ 8 ದಿನದಿಂದ ನಡೆಸುತ್ತಿರುವ ದಾಳಿಗೆ ಬಲಿಯಾದವರು
71 ಮಂದಿ ದಾಳಿಯಿಂದ ಗಾಯಗೊಂಡವರು
3 ಮಂದಿ ಪಾಕ್ ದಾಳಿಯಿಂದ ಗಾಯಗೊಂಡಿರುವ ಬಿಎಸ್ಎಫ್ ಯೋಧರು
16000 ಮಂದಿ ಸ್ಥಳಾಂತರ
ಶೀಘ್ರ ಪರಿಸ್ಥಿತಿ ತಿಳಿಗೊಳ್ಳಲಿದೆ
ಕದನ ವಿರಾಮ ಉಲ್ಲಂಘನೆ ಕುರಿತು ವಾರದಿಂದ ಸುಮ್ಮನಿದ್ದ ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿ ಮಾತನಾಡಿದ್ದಾರೆ. 'ಶೀಘ್ರದಲ್ಲೇ ಪರಿಸ್ಥಿತಿ ತಿಳಿಗೊಳ್ಳಲಿದೆ' ಎಂದಿದ್ದಾರೆ. ಪಾಕ್ ದಾಳಿಗೆ 9 ಮಂದಿ ನಾಗಲಿಕರು ಬಲಿಯಾಗಿದ್ದರೂ ಪ್ರಧಾನಿ ಯಾವುದೇ ಹೇಳಿಕೆ ನೀಡದಿರುವ ಕುರಿತು ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಈ ನಡುವೆ, ಗಡಿ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೂಡ ಪ್ರಧಾನಿ ವಿರುದ್ಧ ಹರಿಹಾಯ್ದಿದ್ದಾರೆ. ಪಾಕ್ ಸೇನೆ ಪದೇ ಪದೆ ಕದನ ವಿರಾಮ ಉಲ್ಲಂಘಿಸುತ್ತಿದ್ದರೂ ಮೋದಿ ಸರ್ಕಾರ ಯಾವುದೇ ಕ್ರಮ ಕೈ ಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಪಾಕಿಸ್ತಾನ ಈಗ ಮೊದಲಿನಂತಿಲ್ಲ. ಅದೀಗ ಸೈತಾನಿಸ್ಥಾನ, ಆತಂಕಿಸ್ತಾನ ಆಗಿ ಪರಿವರ್ತನೆಯಾಗಿದೆ. ಇಂಥವರನ್ನು ಹೇಗೆ ನಿಭಾಯಿಸಬೇಕು ಎನ್ನುವುದು ನಮ್ಮ ಸೇನೆಗೆ ಚೆನ್ನಾಗಿ ಗೊತ್ತಿದೆ. ಅವರು ಪಾಕ್ಗೆ ತಕ್ಕ ಉತ್ತರ ನೀಡುತ್ತಿದ್ದಾರೆ.
ಮುಕ್ತಾರ್ ಅಬ್ಬಸ್ ನಖ್ವಿ
ಬಿಜೆಪಿ ಮುಖಂಡ
ಈ ಬಾರಿ ನಮ್ಮ ಸೇನಾಪಡೆ ಮತ್ತು ಸರ್ಕಾರ ಪದೇಪದೆ ಕದನ ವಿರಾಮ ಉಲ್ಲಂಘಿಸುವ ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸುವುದು ಖಚಿತ.
ಅರುಣ್ ಜೇಟ್ಲಿ. ರಕ್ಷಣಾ ಸಚಿವ
ರಾಷ್ಟ್ರೀಯತೆಯ ಬಗ್ಗೆ ಗಟ್ಟಿಧ್ವನಿಯಲ್ಲಿ ಮಾತನಾಡುವ ನಮ್ಮ ಪ್ರಧಾನಿ ಈ ವರೆಗೆ ಪಾಕ್ನ ಅಪ್ರಚೋದಿತ ದಾಳಿ ಕುರಿತು ಒಂದೇ ಒಂದು ಮಾತು ಆಡಿಲ್ಲ? ಇದೊಂದು ಅವಮಾನಕರ ಸಂಗತಿ.
ಅಭಿಷೇಕ್ ಸಿಂಘ್ವಿ,
ಕಾಂಗ್ರೆಸ್ ವಕ್ತಾರ