ಡಿವಿಎಸ್ ಪುತ್ರನ ವಿವಾ(ದ)ಹ: ಕೌಟುಂಬಿಕ ಕೋರ್ಟ್ನಿಂದ ಕಾರ್ತಿಕ್ ಗೆ ನೋಟಿಸ್
ಬೆಂಗಳೂರು: ಕೇಂದ್ರ ರೇಲ್ವೆ ಸಚಿವ ಡಿ.ವಿ.ಸದಾನಂದಗೌಡ ಅವರ ಪುತ್ರ ಕಾರ್ತಿಕ್ ಗೌಡ ವಿವಾಹ ಪ್ರಕರಣ ಈಗ ಮತ್ತೊಂದು ತಿರುವು ಪಡೆದುಕೊಂಡಿದ್ದು, ವಿವಾಹವನ್ನು ಉರ್ಜಿತಗೊಳಿಸುವಂತೆ ಕೋರಿ ನಟಿ ಮೈತ್ರಿಯಾ ಗೌಡ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಇಂದು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಮೈತ್ರಿಯಾ ಗೌಡ, ಕಾರ್ತಿಕ್ ತನ್ನ ಕಾನೂನುಬದ್ಧ ಪತಿ ಎಂದು ಘೋಷಿಸಬೇಕು ಮತ್ತು ಪತ್ನಿಗಿರಬೇಕಾದ ಎಲ್ಲಾ ಹಕ್ಕುಗಳನ್ನು ನೀಡುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಬೇರೆ ಯುವತಿಯೊಂದಿಗೆ ಕಾರ್ತಿಕ್ಗೌಡ ಮತ್ತೆ ಮದುವೆಯಾಗದಂತೆ ತಡೆ ನೀಡಬೇಕು ಎಂದು ಮೈತ್ರಿಯಾ ಕೇಳಿಕೊಂಡಿದ್ದಾರೆ.
ಮೈತ್ರಿಯಾ ಗೌಡ ಅವರ ಅರ್ಜಿಯನ್ನು ಸ್ವೀಕರಿಸಿರುವ ಕೋರ್ಟ್, ಈ ಸಂಬಂಧ ಕಾರ್ತಿಕ್ ಗೌಡ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಕಾರ್ತಿಕ್ ಗೌಡ ತನ್ನನ್ನು ಅಪಹರಿಸಿ, ಅತ್ಯಾಚಾರ ಮಾಡಿ ಬಳಿಕ ಮದುವೆ ಮಾಡಿಕೊಳ್ಳುವುದಾಗಿ ಹೇಳಿ ವಂಚಿಸಿದ್ದಾರೆ ಎಂದು ಆರೋಪಿಸಿ ನಟಿ ಮೈತ್ರಿಯಾ ಗೌಡ ಅವರು ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.