ನಿರ್ಭಯ್ ಕ್ಷಿಪಣಿ ಪರೀಕ್ಷಾರ್ಥ ಹಾರಾಟ ಯಶಸ್ವಿ
ಪರಮಾಣು ಸಾಮರ್ಥ್ಯ ಹೊಂದಿರುವ ಸುಮಾರು 700 ಕಿ.ಮೀ ದೂರದಿಂದ ಗುರಿ ಮುಟ್ಟಬಲ್ಲ ನಿರ್ಭಯ್...
ಬಾಲಾಸೋರ್: ಪರಮಾಣು ಸಾಮರ್ಥ್ಯ ಹೊಂದಿರುವ ಸುಮಾರು 700 ಕಿ.ಮೀ ದೂರದಿಂದ ಗುರಿ ಮುಟ್ಟಬಲ್ಲ ನಿರ್ಭಯ್ ಕ್ಷಿಪಣಿಯ ಪ್ರಾಯೋಗಿಕ ಪರೀಕ್ಷೆ ಶುಕ್ರವಾರ ಯಶಸ್ವಿಯಾಗಿ ನೆರವೇರಿದೆ.
ಒಡಿಶಾದ ಚಂಡೀಪುರ್ ಕೇಂದ್ರದಿಂದ ಈ ಪರೀಕ್ಷಾರ್ಥ ಹಾರಾಟ ನಡೆಸಿದ್ದು, ಈ ಮೊದಲು ನಿರ್ಭಯ್ ಕ್ಷಿಪಣಿಯನ್ನು ಮಾರ್ಚ್ 12,2013ರಂದು ತಾಂತ್ರಿಕ ಪರೀಕ್ಷೆ ಮಾಡಲಾಗಿತ್ತು.
ಶುಕ್ರವಾರ ಬೆಳಗ್ಗೆ 10.04 ರ ವೇಳೆಗೆ ಕ್ಷಿಪಣಿ ಹಾರಾಟ ನಡೆಸಿದ್ದು, 800 ಕಿ.ಮೀ ಚಿಮ್ಮಿದ ನಿರ್ಭಯ್ 11.00 ಗಂಟೆಯ ವೇಳೆಗೆ ಬಂಗಾಳಕೊಲ್ಲಿಯತ್ತ ತಿರುಗಿದ್ದು, ಹಾರಾಟ ಯಶಸ್ವಿಯಾಗಿದೆ ಎಂದು ಡಿಆರ್‌ಡಿಒ ಅಧಿಕೃತರು ಹೇಳಿದ್ದಾರೆ.
ಉಳಿದ ಕ್ಷಿಪಣಿಗಳಿಗೆ ಹೋಲಿಸಿದರೆ ಇದು ಅತ್ಯಂತ ಹಗುರ ಹಾಗೂ ನಾಜೂಕಾಗಿ ಸಿದ್ಧಗೊಳಿಸಲಾಗಿದೆ. ಯಾವ ಕಡೆ ಬೇಕಾದರೂ ಸುಲಭವಾಗಿ ತಿರುಗಬಲ್ಲ, ಹಾಗೂ ಆಕಾಶದಲ್ಲಿ ಯಾವುದೇ ಕಸರತ್ತಿಗೂ ಸೈ ಎನಿಸುವಂತ ಶಕ್ತಿಯನ್ನು ನಿರ್ಭಯ್ ಹೊಂದಿದೆ.
ನಿರ್ಭಯ್ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿರುವ ಬಗ್ಗೆ ಸಂತಸ ವ್ಯಕ್ತ ಪಡಿಸಿದ ಡಿಆರ್‌ಡಿಒ ತಂತ್ರಜ್ಞರು, ನಿರ್ಭಯ್ ಕ್ಷಿಪಣಿ ಸೇನಾಪಡೆಯ ಶಕ್ತಿಗೆ ಹೊಸ ಆಯಾಮವನ್ನು ನೀಡಲಿದೆ ಎಂದು ಹೇಳಿದ್ದಾರೆ.