ಹುಡ್ಹುಡ್: ಸಾವಿನ ಸಂಖ್ಯೆ 41ಕ್ಕೆ ಏರಿಕೆ
ಕಳೆದ ವಾರ ಭಾರತದ ಪೂರ್ವ ಕರಾವಳಿಗೆ ಹುಡ್ ಹುಡ್ ಚಂಡಮಾರುತ ಅಪ್ಪಳಿಸಿದುದರ ಪರಿಣಾಮ ಸಾವಿಗೀಡಾದವರ...
ನವದೆಹಲಿ: ಕಳೆದ ವಾರ ಭಾರತದ ಪೂರ್ವ ಕರಾವಳಿಗೆ ಹುಡ್ ಹುಡ್ ಚಂಡಮಾರುತ ಅಪ್ಪಳಿಸಿದುದರ ಪರಿಣಾಮ ಸಾವಿಗೀಡಾದವರ ಸಂಖ್ಯೆ 41ಕ್ಕೇರಿದೆ. ಹುಡ್ಹುಡ್ ದಾಳಿಗೊಳಗಾದ ಪ್ರದೇಶಗಳಲ್ಲಿ ಈವರೆಗೂ ವಿದ್ಯುತ್, ವಾಹನ ಸಂಚಾರ ಹಾಗೂ ಸಂಪರ್ಕ ವ್ಯವಸ್ಥೆ ಸರಿಹೋಗಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳು ಹೇಳಿದ್ದಾರೆ.
ಹುಡ್ಹುಡ್ ಚಂಡಮಾರುತ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಗೆ ಅಪ್ಪಳಿಸಿದ್ದು, ಅಲ್ಲಿನ ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಈ ಚಂಡಮಾರುತದಿಂದಾಗಿ ಸುಮಾರು 150,000 ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ.
ಹುಡ್ಹುಡ್ ಪೀಡಿತ ಪ್ರದೇಶಗಳ ಪೈಕಿ ಶೇ.60ರಷ್ಟು ಪ್ರದೇಶಗಳಲ್ಲಿ ಮಾತ್ರ ವಿದ್ಯುತ್ ಸಂಪರ್ಕ ಪುನರ್ ಕಲ್ಪಿಸಲಾಗಿದ್ದು, ಇನ್ನೆರಡು ದಿನಗಳಲ್ಲಿ ಹೆಚ್ಚಿನ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಸರಿಪಡಿಸಲಾಗುವುದು ಎಂದು ಆಂಧ್ರದ ವಿಪತ್ತು ನಿರ್ವಹಣಾ ಇಲಾಖೆಯ ಮುಖ್ಯಸ್ಥ ಎ.ಆರ್ ಸುಕುಮಾರ್ ಹೇಳಿದ್ದಾರೆ.
ಆದಾಗ್ಯೂ, ಹುಡ್ಹುಡ್ ದಾಳಿಗೊಳಗಾದ ಆಂಧ್ರಪ್ರದೇಶದಲ್ಲಿ 38 ಮಂದಿ ಹಾಗೂ ಒಡಿಶಾದಲ್ಲಿ 3 ಜನ ಸಾವಿಗೀಡಾಗಿದ್ದಾರೆ.