ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮಾಜಿ ಸಿಎಂ ಹಾಗೂ ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಜಯಾ ಬಿಡುಗಡೆಯಾಗಿದ್ದಾರೆ.
ಸುಪ್ರೀಂಕೋರ್ಟ್ ನೀಡಿದ್ದ ಜಾಮೀನಿನ ಆದೇಶದ ಪ್ರತಿಯನ್ನು ಜಯಾ ಪರ ವಕೀಲರು ಇಂದು ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಬೆಂಗಳೂರಿನ ವಿಶೇಷ ಕೋರ್ಟ್‌ಗೆ ಸಲ್ಲಿಸಿದರು. ಈ ಆದೇಶ ಪ್ರತಿಯನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳು ಜಯಾ ಶ್ಯೂರಿಟಿ ನೀಡುವಂತೆ ಸೂಚಿಸಿದರು. ಜಯಾ ಪರ ಇಬ್ಬರು ಶ್ಯೂರಿಟಿ ನೀಡಿದ್ದಾರೆ. ಮೊದಲನೆಯದಾಗಿ ಜೆ. ಭರತ್ ಎಂಬುವರು ಶ್ಯೂರಿಟಿ ನೀಡಿದ್ದು, ಇದಕ್ಕಾಗಿ 5 ಕೋಟಿ ಮೊತ್ತದ ಆಸ್ತಿಯನ್ನು ಭದ್ರತೆಗೆ ನೀಡಿದ್ದಾರೆ. ಎರಡನೇಯದಾಗಿ ಗುಣಜ್ಯೋತಿ ಎಂಬುವರು 1 ಕೋಟಿ ರು. ಮೊತ್ತದ ಆಸ್ತಿಯನ್ನು ಶ್ಯೂರಿಟಿಯಾಗಿ ನೀಡಿದ್ದಾರೆ.
ನಂತರ ಶ್ಯೂರಿಟಿದಾರರಿಗೆ ನ್ಯಾಯಮೂರ್ತಿ ಜಾನ್ ಮೈಕಲ್ ಡಿ ಕುನ್ಹಾ ಅವರು, 1 ಕೋಟಿ ಮೊತ್ತದ ಬಾಂಡ್ ಬರೆದುಕೊಂಡುವಂತೆ ಸೂಚಿಸಿದರು. ಅಲ್ಲದೆ ಕೋರ್ಟ್ ಹೇಳಿದಾಗ ಅಪರಾಧಿಯನ್ನು ಕೋರ್ಟ್‌ಗೆ ಹಾಜರುಪಡಿಸಬೇಕು ಒಂದು ವೇಳೆ ಅಪರಾಧಿಯನ್ನು ನಿಗದಿತ ಸಮಯದಲ್ಲಿ ಹಾಜರುಪಡಿಸಲು ಸಾಧ್ಯವಾಗದೆ ಇದ್ದ ಪರಿಸ್ಥಿತಿಯಲ್ಲಿ ತಮ್ಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಜಯಲಲಿತಾ ಸೇರಿದಂತೆ ಮೂವರಿಗೂ ನಿನ್ನೆ ಸುಪ್ರೀಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಈ ಎಲ್ಲಾ ಅಪರಾಧಿಗಳಿಗೆ ಶ್ಯೂರಿಟಿ ನೀಡಿದ ಹಿನ್ನೆಲೆಯಲ್ಲಿ ನಾಲ್ವರ ಬಿಡುಗಡೆಗೆ ಪರಪ್ಪನ ಅಗ್ರಹಾರ ಜೈಲು ಅಧೀಕ್ಷಕರಿಗೆ ನ್ಯಾಯಮೂರ್ತಿಗಳು ಆದೇಶ ನೀಡಿದ್ದಾರೆ.
ಜೈಲಿನ ಸುತ್ತ ನಿಷೇಧಾಜ್ಞೆ ಜಾರಿ
ಜಯಲಲಿತಾ ಬಿಡುಗಡೆ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಜಯಲಲಿತಾ ಸಂಚರಿಸುವ ಮಾರ್ಗದಲ್ಲಿ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿದೆ. ಪರಪ್ಪನ ಅಗ್ರಹಾರದಿಂದ ಜಯಲಲಿತಾ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ವಿಶೇಷ ವಿಮಾಣದ ಮೂಲಕ ತಮಿಳುನಾಡಿಗೆ ತೆರಳಲಿದ್ದಾರೆ.
ಇನ್ನು ಜಯಲಲಿತಾ ಝೆಡ್ ಪ್ಲಸ್ ಭದ್ರತೆ ಹೊಂದಿದ್ದು, ಭದ್ರತಾ ಸಿಬ್ಬಂದಿ ಪರಪ್ಪನ ಅಗ್ರಹಾರಕ್ಕೆ ಆಗಮಿಸಿದ್ದಾರೆ. ಪರಪ್ಪನ ಅಗ್ರಹಾರ ಎಚ್‌ಎಎಲ್ ಮಾರ್ಗ, ಎಚ್‌ಎಎಲ್ ವಿಮಾನ ನಿಲ್ದಾಣದವರೆಗೆ ಸುಮಾರು 5 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದ್ದು, ಹಿರಿಯ ಪೊಲೀಸ್ ಅಲೋಕ್ ಕುಮಾರ್ ಭದ್ರತೆ ಉಸ್ತುವಾರಿ ಹೊತ್ತಿದ್ದಾರೆ.
ಬೆಂಗಳೂರಿಗೆ ಬಂದ ಸಿಎಂ ಪನ್ನೀರ್ ಸೆಲ್ವಂ
ಜಯಲಲಿತಾ ಬಿಡುಗಡೆ ಹಿನ್ನೆಲೆ ಅವರನ್ನು ಸ್ವಾಗತಿಸಲು ತಮಿಳುನಾಡಿನ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರು ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿದ್ದಾರೆ. ಅದರಂತೆ ಅವರ ನೂರಾರು ಅಭಿಮಾನಿಗಳು ಸಹ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಚ್.ಎಲ್ ದತ್ತು, ನ್ಯಾ. ಮದನ್ ಬಿ ಲೋಕೂರ್ ಹಾಗೂ ನ್ಯಾ. ಎ.ಕೆ ಸಿಕ್ರಿ ಅವರ ಪೀಠ ಎಲ್ಲಾ ನಾಲ್ವರು ಅಪರಾಧಿಗಳಿಗೂ ಶುಕ್ರವಾರ ಜಾಮೀನು ಮಂಜೂರು ಮಾಡಿತ್ತು. ಆದರೆ ಸುಪ್ರೀಂ ಆದೇಶದ ಪ್ರತಿ ಬೆಂಗಳೂರು ತಲುಪುವುದು ತಡವಾದ ಕಾರಣ ಇಂದು ಜಾಮೀನು ಪ್ರಕ್ರಿಯೆ ನಡೆದಿದೆ.