ಯಾವುದೇ ಪಕ್ಷದ ಬೆಂಬಲವಿಲ್ಲದೆ ಸರ್ಕಾರ ರಚಿಸುವ ಬಗ್ಗೆ ಬಿಜೆಪಿ ಯೋಚನೆ?
ಮಹಾರಾಷ್ಟ್ರದಲ್ಲಿ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಲು ಶಿವಸೇನೆ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್‌ಸಿಪಿ)...
ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಲು ಶಿವಸೇನೆ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್‌ಸಿಪಿ) ತುದಿಗಾಲಿನಲ್ಲಿ ನಿಂತಿದ್ದರೂ, ಇತ್ತ ಬಿಜೆಪಿ ಏಕಾಂಗಿಯಾಗಿ ಸರ್ಕಾರ ರಚಿಸುವ ಬಗ್ಗೆ ಯೋಚಿಸುತ್ತಿದ್ದೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.
ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಎನ್‌ಸಿಪಿ ಅಥವಾ ಶಿವಸೇನೆಯೊಂದಿಗಿನ ಮಹಾ ಮೈತ್ರಿ ಕಗ್ಗಂಟಾಗಿ ಪರಿಣಮಿಸಿರುವುದರಿಂದ ಸರ್ಕಾರ ರಚನೆಗೆ ಬಿಜೆಪಿ 12 ಸ್ವತಂತ್ರ ಶಾಸಕರ ಬೆಂಬಲವನ್ನು ಪಡೆಯುವ ಸಾಧ್ಯತೆಯಿದೆ.
ದೀಪಾವಳಿಯ ನಂತರವೇ ಮಹಾ ಸರ್ಕಾರ ರಚನೆ ಮಾಡುವುದಾಗಿ ಹೇಳಿ ಗೃಹ ಸಚಿವ ರಾಜ್‌ನಾಥ್ ಸಿಂಗ್ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಜೆ.ಪಿ ನಡ್ಡಾ ಮಂಗಳವಾರ ತಮ್ಮ ಮುಂಬೈ ಭೇಟಿಯನ್ನು ರದ್ದುಗೊರಿಸಿದ್ದರು.
ಆದಾಗ್ಯೂ, ಮಹಾ ಸರ್ಕಾರದಲ್ಲಿ ಯಾರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬುದರ ಬಗ್ಗೆಯೂ ಸದ್ಯ ಬಿಜೆಪಿ ಮುಖಂಡರು ಯಾವುದೇ ತೀರ್ಮಾನ ಕೈಗೊಂಡಿಲ್ಲ.
ಚುನಾವಣೆ ಪ್ರಚಾರದ ವೇಳೆ ಶಿವಸೇನೆ ಪ್ರದಾನಿ ನರೇಂದ್ರ ಮೋದಿ ಅವರ ವಿರುದ್ಧ ಯದ್ವಾತದ್ವ ವಾಗ್ದಾಳಿ ನಡೆಸಿತ್ತು. ಮಾತ್ರವಲ್ಲದೆ ಮಹಾರಾಷ್ಟ್ರದಲ್ಲಿ 1995ರ ಸೂತ್ರದಂತೆ ಸಚಿವ ಸ್ಥಾನ ಹಂಚಿಕೆ ಮಾಡುವುದಾದರೆ ತಾವು ಬಿಜೆಪಿಗೆ ಬೆಂಬಲ ನೀಡುವುದಾಗಿ ಶಿವಸೇನೆ ಹೇಳಿತ್ತು. ಆದರೆ ಷರತ್ತಿನ ಬೆಂಬಲವನ್ನು ಬಿಜೆಪಿ ತಿರಸ್ಕರಿಸಿದ್ದು, ಬಿಜೆಪಿಯ ಮುಂದಿನ ನಡೆ ತೀವ್ರ ಕುತೂಹಲವನ್ನುಂಟು ಮಾಡಿದೆ.
ಇತ್ತ ಎನ್‌ಸಿಪಿಯ ಬಗ್ಗೆ ಹೇಳುವುದಾದರೆ, ಶರದ್ ಪವಾರ್ ನೇತೃತ್ವದ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಹಿಂದೇಟು ಹಾಕುತ್ತಿದೆ. ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ಮೋದಿ ಅವರು ಎನ್‌ಸಿಪಿಯನ್ನು 'ನ್ಯಾಚುರಲಿ ಕರಪ್ಟ್ ಪಾರ್ಟಿ' ಎಂದು ಕರೆದಿದ್ದು, ಎನ್‌ಸಿಪಿಗೆ ಮತ ಹಾಕಬೇಡಿ ಎಂದು ಹೇಳಿದ್ದರು. ಹೀಗಿದ್ದರೂ, ಬಿಜೆಪಿ ಸರ್ಕಾರಕ್ಕೆ ತಾವು ಬಾಹ್ಯ ಬೆಂಬಲ ನೀಡುವುದಾಗಿ ಎನ್‌ಸಿಪಿ ಹೇಳಿತ್ತು.
ಈ ಬಾರಿ 288 ಸದಸ್ಯರಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ 122 ಸೀಟು ಗೆಲ್ಲುವ ಮೂಲಕ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಏತನ್ಮಧ್ಯೆ, ಸರ್ಕಾರ ರಚನೆ ಬಿಕ್ಕಟ್ಟು ಮುಂದುವರಿದಿರುವ ಕಾರಣ ಬಿಜೆಪಿ ಯಾವುದೇ ಪಕ್ಷದ ಸಹಾಯವಿಲ್ಲದೆ ಗದ್ದುಗೆಗೇರಲು ತಂತ್ರ ರೂಪಿಸುತ್ತಿದ್ದು, ಶೀಘ್ರದಲ್ಲೇ ಮಹತ್ತರವಾದ ನಿರ್ಧಾರವನ್ನು ಕೈಗೊಳ್ಳಲಿದೆ.