ಕೆನಡಾ ಸಂಸತ್ ಮೇಲೆ ಉಗ್ರರ ದಾಳಿ
ಕೆನಡಾ ಸಂಸತ್ ಮೇಲೆ ಬುಧವಾರ ಬೆಳಗ್ಗೆ ಉಗ್ರರು ದಾಳಿ ನಡೆಸಿದ್ದು, ಕಾವಲಿದ್ದ ಸೈನಿಕ ಗುಂಡಿಗೆ ಬಲಿಯಾದ ಘಟನೆ ಬಗ್ಗೆ ವರದಿ...
ಒಟ್ಟಾವಾ: ಕೆನಡಾ ಸಂಸತ್ ಮೇಲೆ ಬುಧವಾರ ಬೆಳಗ್ಗೆ ಉಗ್ರರು ದಾಳಿ ನಡೆಸಿದ್ದು, ಕಾವಲಿದ್ದ ಸೈನಿಕ ಗುಂಡಿಗೆ ಬಲಿಯಾದ ಘಟನೆ ಬಗ್ಗೆ ವರದಿಯಾಗಿದೆ.
ಕೆನಡಾ ಸಂಸತ್ನಲ್ಲಿ ಪ್ರಧಾನಿ ಸ್ಟೀಫನ್ ಹಾರ್ಪರ್ ಮಾತನಾಡುತ್ತಿದ್ದ ವೇಳೆ ಕೊಠಡಿಯ ಹೊರಗೆ ಗುಂಡಿನ ದಾಳಿ ನಡೆದಿದೆ. ಗುಂಡು ಹಾರಿಸಿದ ಉಗ್ರನನ್ನು ಆಗಲೇ ಗುಂಡಿಕ್ಕಿ ಸಾಯಿಸಿದ್ದು, ಹಾರ್ಪರ್ ಅವರನ್ನು ಸುರಕ್ಷಿತವಾಗಿ ಕರೆದೊಯ್ಯಲಾಗಿದೆ.
ಉಗ್ರರು ಕನಿಷ್ಠ 30 ಬಾರಿ ಗುಂಡು ಹಾರಿಸಿದ ನಂತರ ಸಂಸತ್ನೊಳಗೆ ಪ್ರವೇಶಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಹಾರ್ಪರ್ ಅವರು ಸಭೆ ನಡೆಸುತ್ತಿದ್ದ ಕೊಠಡಿಯ ಪಕ್ಕದಲ್ಲೇ ಗುಂಡಿನ ದಾಳಿ ನಡೆದಿದೆ ಎಂದು ಅಲ್ಲಿನ ಸಚಿವ ಟಾನಿ ಕ್ಲಿಮೆಂಟ್ ಹೇಳಿದ್ದಾರೆ.
ಗುಂಡಿನ ದಾಳಿಗೆ ನಡುಗಿರುವ ಸಂಸತ್ ಕಟ್ಟಡಕ್ಕೆ ಸದ್ಯ ಬೀಗ ಹಾಕಿದ್ದು, ಸುತ್ತಲೂ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಕಳೆದ ಮೂರು ದಿನಗಳಲ್ಲಿ ಇದು ಎರಡನೇ ಬಾರಿ ಕೆನಡಾ ಮೇಲೆ ದಾಳಿ ನಡೆದಿದೆ. ಉಗ್ರರ ದಾಳಿಯನ್ನು ಖಂಡಿಸಿದ ಹಾರ್ಪರ್ ನಾವು ಉಗ್ರರ ದಾಳಿಯನ್ನು ಸಹಿಸುವುದಿಲ್ಲ, ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.