ಜಮ್ಮು-ಕಾಶ್ಮೀರಕ್ಕೆ ರು. 745 ಕೋಟಿ ಪರಿಹಾರ ಘೋಷಿಸಿದ ಮೋದಿ
ಭೀಕರ ಪ್ರವಾಹದಿಂದ ನಲುಗಿದ್ದ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ರು. 745 ಕೋಟಿ ಪರಿಹಾರವನ್ನು ಘೋಷಿಸಿದ್ದಾರೆ.
ಶ್ರೀನಗರ/ನವದೆಹಲಿ: ಭೀಕರ ಪ್ರವಾಹದಿಂದ ನಲುಗಿದ್ದ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ರು. 745 ಕೋಟಿ ಪರಿಹಾರವನ್ನು ಗುರುವಾರ ಘೋಷಿಸಿದ್ದಾರೆ.
ನೆರೆ ಸಂತ್ರಸ್ಥರೊಂದಿಗೆ ದೀಪಾವಳಿ ಆಚರಿಸಲೆಂದು ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿರುವ ಪ್ರಧಾನಿ ಮೋದಿ ಅವರು, ರು. 745ಯನ್ನು ಪರಿಹಾರ ನೀಡಿರುವುದಾಗಿ ಘೋಷಿಸಿದರು. ಅದರಲ್ಲಿ 175 ಕೋಟಿ ಪ್ರಮುಖ ಆರು ಆಸ್ಪತ್ರೆಗಳ ನವೀಕರಣಕ್ಕೆ ಹಾಗೂ 570 ಕೋಟಿಯನ್ನು ಹಾನಿಗೊಳಗಾಗಿರುವ ಮನೆಗಳ ಪುನರ್ನಿರ್ಮಾಣಕ್ಕಾಗಿ ನೀಡಿದ್ದಾರೆ.
ಶ್ರೀನಗರದಲ್ಲಿರುವ ರಾಜಭವನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಮೋದಿ ಅವರು, ಪ್ರವಾಹದಿಂದ ಉಂಟಾದ ಹಾನಿಯಿಂದ ಚೇತರಿಸಿಕೊಳ್ಳಲು ಜಮ್ಮು ಮತ್ತು ಕಾಶ್ಮೀರಕ್ಕೆ ಕೇಂದ್ರದಿಂದ ಸಾಧ್ಯವಿರುವ ಎಲ್ಲ ರೀತಿಯ ನೆರವನ್ನು ನೀಡುವುದಾಗಿ ಭರವಸೆ ನೀಡಿದ್ದರು. ಹಾನಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಸುಮಾರು 44 ಸಾವಿರ ಕೋಟಿ ನಷ್ಟದ ಮಾಹಿತಿಯನ್ನು ನೀಡಿದ್ದು ಅದನ್ನು ಪರಿಗಣಿಸಲಾಗುವುದು ಎಂದರು.
ಶ್ರೀನಗರಕ್ಕೆ ಬರುವುದಕ್ಕೂ ಮುನ್ನ ಹೆಚ್ಚು ದಾಳಿಗಳು ನಡೆಯುವ ಜಮ್ಮು ಮತ್ತು ಕಾಶ್ಮೀರದ ಸಿಯಾಚಿನ್ಗೆ ದಿಢೀರ್ ಭೇಟಿ ನೀಡಿದ ಮೋದಿ, ಮಿಲಿಟರಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಗೌರವ ಸಮರ್ಪಿಸಿದರು.
ಬಳಿಕ ರಾಜಧಾನಿ ಶ್ರೀನಗರಕ್ಕೆ ತೆರಳಿರುವ ಅವರು ಇಂದು ರಾತ್ರಿ ರಾಜ್ಯದ ಜನತೆಯೊಂದಿಗೆ ದೀಪಾವಳಿ ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.