ಕವಿವಿ ನೇಮಕಾತಿ ಅಕ್ರಮ: ವಾಲೀಕರ್ ಜಾಮೀನು ಅರ್ಜಿ ವಜಾ
ಕರ್ನಾಟಕ ವಿಶ್ವವಿದ್ಯಾಲಯದ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಕರ್ನಾಟಕ...
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಬಿ.ವಾಲೀಕರ್ ಅವರ ಜಾಮೀನು ಅರ್ಜಿಯನ್ನು ಲೋಕಾಯುಕ್ತ ಕೋರ್ಟ್ ಗುರುವಾರ ವಜಾಗೊಳಿಸಿದೆ. ಆದರೆ ವಾಲೀಕರ್ ಅವರನ್ನು ಹೊರತುಪಡಿಸಿ ಇತರೆ ಮೂವರು ಆರೋಪಿಗಳಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ನೇಮಕಾತಿ ಅವ್ಯವಹಾರ ಸಂಬಂಧ ವಾಲೀಕರ್ ಸೇರಿದಂತೆ ವಿವಿಯ ನಾಲ್ಕು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ಮತ್ತು ನಂಬಿಕೆ ದ್ರೋಹ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ಸಂಬಂಧ ವಾಲೀಕರ್ ಸೇರಿದಂತೆ ನಾಲ್ವರು ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಲೋಕಾಯುಕ್ತ 3ನೇ ಜೆಎಂಎಫ್ಸಿ ಕೋರ್ಟ್, ಪ್ರಮುಖ ಆರೋಪಿ ವಾಲೀಕರ್ ಹೊರತುಪಡಿಸಿ ಇತರ ಮೂವರು ಆರೋಪಿಗಳಾದ ಕುಲಪತಿ ಆಪ್ತ ಕಾರ್ಯದರ್ಶಿ ಎಸ್.ಎಲ್. ಬೀಳಗಿ, ಮೌಲ್ಯ ಮಾಪನ ಕುಲಸಚಿವ ಎಚ್.ಟಿ. ಪೋತೆ ಹಾಗೂ ಹಣಕಾಸು ಅಧಿಕಾರಿ ರಾಜಶ್ರೀಗೆ ಷರತ್ತುಬದ್ಧ ಜಾಮೀನು ನೀಡಿದೆ.
ಭೋದಕ ಮತ್ತು ಭೋದಕೇತರ ಸಿಬ್ಬಂದಿಗಳ ನೇಮಕಾತಿ ವೇಳೆ ವ್ಯಾಪಕ ಅಕ್ರಮಗಳು ನಡೆದಿದ್ದು, ಈ ಕುರಿತು ತನಿಖೆ ಕೈಗೊಂಡ ಲೋಕಾಯುಕ್ತ ವಾಲೀಕಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತಿದ್ದಾರೆ.