ಬಾಲಬ್ರೂಯಿ ನೆಲಸಮಕ್ಕೆ ಕಾರಣವಾಯಿತೇ ಭೂತದ ಭಯ?
ಐತಿಹಾಸಿಕ ಬಾಲಬ್ರೂಯಿ ಅತಿಥಿಗೃಹ ಸದ್ಯದಲ್ಲೇ ಇತಿಹಾಸದ ಪುಟಗಳನ್ನು ಸೇರಲಿದೆ. ಭೂತದ ಭಯದಿಂದಾಗಿ...
ಬೆಂಗಳೂರು: ಐತಿಹಾಸಿಕ ಬಾಲಬ್ರೂಯಿ ಅತಿಥಿಗೃಹ ಸದ್ಯದಲ್ಲೇ ಇತಿಹಾಸದ ಪುಟಗಳನ್ನು ಸೇರಲಿದೆ. ಭೂತದ ಭಯದಿಂದಾಗಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಈ ಸರ್ಕಾರಿ ಅತಿಥಿ ಗೃಹವನ್ನು ಕೆಡವಿ ಆ ಜಾಗದಲ್ಲಿ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗಾಗಿ ಸುಸಜ್ಜಿತ ಕ್ಲಬ್‌ಹೌಸ್ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲೇ ಬಾಲಬ್ರೂಯಿ ಅತಿಥಿ ಗೃಹವನ್ನು ಕೆಡವಿ ಕ್ಲಬ್‌ಹೌಸ್ ನಿರ್ಮಿಸುವ ಯತ್ನ ಆರಂಭವಾಗಿತ್ತು. ಈ ಬಗ್ಗೆ ಕನ್ನಡಪ್ರಭದಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಬಳಿಕ ಸಾರ್ವಜನಿಕವಾಗಿ ಟೀಕೆಗಳು ವ್ಯಕ್ತವಾದ ಕಾರಣ ತಾತ್ಕಾಲಿಕವಾಗಿ ಪ್ರಸ್ತಾಪ ಕೈ ಬಿಡಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಾಲಬ್ರೂಯಿಯನ್ನು ಕೆಡವುವುದಕ್ಕೆ ಮತ್ತೆ ಪ್ರಯತ್ನ ಆರಂಭವಾಗಿದ್ದು, ಇದನ್ನು ನಿಲ್ಲಿಸುವಂತೆ ನ್ಯಾಯಾಲದಲ್ಲಿ ಮಾಡಿದ್ದ ಮನವಿಗೂ ಬೆಲೆ ಸಿಕ್ಕಿಲ್ಲ. ಹೀಗಾಗಿ ನ.15ರಂದು ಬಾಲಬ್ರೂಯಿಯನ್ನು ನೆಲಸಮಗೊಳಿಸುವುದಕ್ಕೆ ಆರಂಭಗೊಳ್ಳಲಿದ್ದು, ಪಾರಂಪರಿಕ ಕಟ್ಟಡವೊಂದು ಇತಿಹಾಸದ ಪುಟದಲ್ಲಿ ಸೇರಿ ಹೋಗಲಿದೆ. ಐತಿಹಾಸಿಕ ಹಿನ್ನೆಲೆ ಹೊಂದಿರುವ ಬಾಲಬ್ರೂಯಿ ಕೆಲವೇ ದಿನಗಳಲ್ಲಿ ನೆನಪಾಗಿ ಉಳಿಯಲಿದ್ದು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ಮೋಜಿನ ಕ್ಲಬ್‌ಹೌಸ್ ಆಗಲಿದೆ.
ನೆಲಸಮಕ್ಕೆ ಕಾರಣವಾಯಿತೇ ಭೂತದ ಭಯ?
ಹೆಸರು ಹೇಳಲಿಚ್ಚಿಸದ ಶಾಸಕರೊಬ್ಬರ ಪ್ರಕಾರ, ಈ 'ಭೂತ್ ಬಂಗ್ಲೆ'ಯನ್ನು ಬಳಸಲು ಯಾವ ಒಬ್ಬ ಜನಪ್ರತಿನಿಧಿಯೂ ಸಿದ್ಧರಿಲ್ಲ. ಹೀಗಾಗಿ ಸರ್ಕಾರ ಅದನ್ನು ನೆಲಸಮಗೊಳಿಸಲು ನಿರ್ಧರಿಸಿದೆ ಎನ್ನಲಾಗಿದೆ.
ಈ ಕಟ್ಟಡಕ್ಕಿದೆ 150 ವರ್ಷದ ಇತಿಹಾಸ
ಬ್ರಿಟಿಷ್ ಆಡಳಿತದ ಸಂರ್ದಭದಲ್ಲಿ ಬೆಂಗಳೂರು ಕಮಿಷನರ್ ಆಗಿದ್ದ ಲಾರ್ಡ್ ಮಾರ್ಕ್ 1850ರಲ್ಲಿ ಬಾಲಬ್ರೂಯಿ ಅತಿಥಿಗೃಹವನ್ನು ನಿರ್ಮಿಸಿದ್ದ. ಸುಮಾರು 14 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಈ ಕಟ್ಟಡವಿದ್ದು, 150 ವರ್ಷಗಳ ಇತಿಹಾಸ ಹೊಂದಿದೆ. ಅಷ್ಟು ಮಾತ್ರವಲ್ಲ, ವಿಶ್ವಕವಿ ರವೀಂದ್ರನಾಥ್ ಟ್ಯಾಗೋರ್ ಹಾಗೂ ಮಾಜಿ ಪ್ರಧಾನಿ ಜವಾಹರ್‌ಲಾಲ್ ನೆಹರು ಈ ಅತಿಥಿಗೃಹದ ಸೊಬಗಿಗೆ ಮಾರು ಹೋಗಿದ್ದರು. ಇಂದಿರಾಗಾಂಧಿ ದೇಶದ ಪ್ರದಾನಿಯಾಗಿದ್ದಾಗ ಬೆಂಗಳೂರಿಗೆ ಆಗಮಿಸಿದ್ದರೆ ಬಾಲಬ್ರೂಯಿಯಲ್ಲೇ ವಾಸ್ತವ್ಯ ಹೂಡುತ್ತಿದ್ದರು. ಮಾಜಿ ಮುಖ್ಯಮಂತ್ರಿ ದಿ.ದೇವರಾಜ್ ಅರಸು ಅವರಿಗೂ ಇದು ನೆಚ್ಚಿನ ತಾಣವಾಗಿತ್ತು.