ಪತ್ರಕರ್ತರ ಜತೆ ಮೋದಿ ಚಹಾಕೂಟ
ಪ್ರಧಾನಿ ನರೇಂದ್ರ ಮೋದಿ ಶನಿವಾರ ಮಾಧ್ಯಮದವರಿಗೆ ಚಹಾ ಕೂಟವೊಂದನ್ನು ಹಮ್ಮಿಕೊಂಡಿದ್ದು ಬೆಳಗ್ಗೆ 11.30...
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶನಿವಾರ ಮಾಧ್ಯಮದವರಿಗೆ ಚಹಾ ಕೂಟವೊಂದನ್ನು ಹಮ್ಮಿಕೊಂಡಿದ್ದು ಬೆಳಗ್ಗೆ 11.30 ವೇಳೆಗೆ ಬಿಜೆಪಿ ಪ್ರಧಾನ ಕಾರ್ಯಾಲಯದಲ್ಲಿ ಈ ಚಹಾಕೂಟ ನಡೆಯಲಿದೆ.
ಪ್ರಧಾನಿ ಪಟ್ಟಕ್ಕೇರಿದ ನಂತರ ಮೋದಿ ಅವರು ತಮಗೆ ಏನು ಹೇಳಬೇಕೋ, ಎಲ್ಲಿ ಹೇಳಬೇಕೋ ಅಷ್ಟನ್ನು ಮಾತ್ರ ಮಾಧ್ಯಮದವರೊಂದಿಗೆ ಮಾತನಾಡಿದ್ದರು. ಆದಾಗ್ಯೂ, ಇದೇ ಮೊದಲ ಬಾರಿಗೆ ಮೋದಿ ಮಾಧ್ಯಮವದರೊಂದಿಗೆ ಈ ರೀತಿಯ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.
ದೆಹಲಿಯ ಅಶೋಕ ರಸ್ತೆಯಲ್ಲಿರುವ ಬಿಜೆಪಿ ಪ್ರಧಾನ ಕಾರ್ಯಾಲಯದಲ್ಲಿ ಮೋದಿ ಮತ್ತು ಪತ್ರಕರ್ತರ ಟೀಪಾರ್ಟಿ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ 'ದೀಪಾವಳಿ ಮಿಲನ್' ಎಂದು ಹೆಸರಿಡಲಾಗಿದೆ.
11.50 ರ ವೇಳೆಗೆ ಮೋದಿ ಬಿಜೆಪಿ ಕಚೇರಿಗೆ ತಲುಪಲಿದ್ದು, ಪತ್ರಕರ್ತರು, ಸಂಪಾದಕರ ಜತೆ 1 ಗಂಟೆ ಕಾಲ ಸಂವಾದ ನಡೆಸಲಿದ್ದಾರೆ.
ಪ್ರಧಾನಿ ಮೋದಿ ನಾಳೆ ಎನ್‌ಡಿಎ ಮಿತ್ರ ಪಕ್ಷಗಳಿಗೆ ಚಹಾ ಕೂಟ ಏರ್ಪಡಿಸಿದ್ದು, ಇಲ್ಲಿ ಮಹಾ ಸರ್ಕಾರ ರಚನೆಯ ಮುನ್ನ ಬಿಜೆಪಿ ಮತ್ತು ಶಿವಸೇನೆ ಒಂದಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಈ ಚಹಾಕೂಟಕ್ಕೆ ಶಿವಸೇನೆಯ ಸಂಸದರು ಭಾಗವಹಿಸುವುದಾಗಿ ಹೇಳಿದ್ದರೂ, ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಪ್ರಸ್ತುತ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೋ ಇಲ್ಲವೋ ಎಂಬುದು ಸದ್ಯ ನಿರ್ಧಾರವಾಗಿಲ್ಲ ಎಂದು ಬಲ್ಲಮೂಲಗಳು ಹೇಳಿವೆ.