ನೀವಿಲ್ಲಿ ಸೇಫ್: ಈಶಾನ್ಯ ವಲಸಿಗರಿಗೆ ಜಾರ್ಜ್ ಅಭಯ
ಭಾರತದ ಈಶಾನ್ಯದಿಂದ ಬಂದಿರುವ ಜನರಿಗೆ ನಗರದಲ್ಲಿ ಯಾವುದೇ ಅಳುಕಿಲ್ಲದಂತೆ ಬದುಕಲು...
ಬೆಂಗಳೂರು: ಭಾರತದ ಈಶಾನ್ಯದಿಂದ ಬಂದಿರುವ ಜನರಿಗೆ ನಗರದಲ್ಲಿ ಯಾವುದೇ ಅಳುಕಿಲ್ಲದಂತೆ ಬದುಕಲು ಅಗತ್ಯ ಭದ್ರತೆ ನೀಡುವುದಾಗಿ ಗೃಹಸಚಿವ ಕೆ ಜೆ ಜಾರ್ಜ್ ಆಶ್ವಾಸನೆ ನೀಡಿದ್ದಾರೆ.
"ನಗರದ ಏಳು ಪೋಲಿಸ್ ವಿಭಾಗಗಳಲ್ಲೂ, ಒಂದೊಂದು ತಂಡದಂತೆ ಏಳು ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡವು ಈಶಾನ್ಯ ಸಮುದಾಯದ ಇಬ್ಬರನ್ನು ಒಳಗೊಂಡಿದೆ ಮತ್ತು ಹಿರಿಯ ಪೋಲಿಸ್ ಅಧಿಕಾರಿಯ ನಾಯಕತ್ವ ಇದೆ. ಈ ತಂಡಗಳು ತಿಂಗಳಿಗೊಮ್ಮೆ ಸಭೆ ನಡೆಸಿ ಅಗತ್ಯ ಬಿದ್ದಲ್ಲಿ ಕ್ರಮ ತೆಗೆದುಕೊಳ್ಳಲಿವೆ" ಎಂದು ನಗರದಲ್ಲಿ ವಾಸಿಸುತ್ತಿರುವ ಈಶಾನ್ಯ ಭಾಗದ ಜನರೊಂದಿಗೆ ನಡೆಸಿದ ಸಭೆಯಲ್ಲಿ ಜಾರ್ಜ್ ತಿಳಿಸಿದ್ದಾರೆ.
ಈ ಸಭೆ ಪೋಲೀಸ್ ಕಮಿಷನರ್ ಕಛೇರಿಯಲ್ಲಿ ನಡೆದಿದ್ದು, ಡಿ ಜಿ ಮತ್ತು ಐಜಿಪಿ ಲಾಲ್ ರುಖೂಮಾ ಪಚಾವ್ ಮತ್ತು ಪೋಲಿಸ್ ಕಮಿಷನರ್ ಎಂ ಎನ್ ರೆಡ್ಡಿ ಸೇರಿದಂತೆ ಹಿರಿಯ ಪೋಲಿಸ್ ಅಧಿಕಾರಿಗಳು ಉಪಸ್ಥಿತರಿದ್ದರು.
"ಯಾವುದೇ ತೊಂದರೆಯಾದಲ್ಲಿ, ಅವರು ಹತ್ತಿರದ ಪೋಲಿಸ್ ಠಾಣೆಯನ್ನೋ , ಅಥವಾ ಉಪ ಪೋಲೀಸ್ ಕಮಿಷನರ್ ಅವರನ್ನೋ ಕಾಣಬಹುದು. ಅಗತ್ಯವಿದ್ದಲ್ಲಿ ನನ್ನನ್ನೂ ಭೇಟಿ ಮಾಡಬಹುದು" ಎಂದಿದ್ದಾರೆ ಜಾರ್ಜ್.
ನಗರದಲ್ಲಿ ಈಶಾನ್ಯ ಜನರ ಮೇಲೆ ನಡೆದ ಯಾವುದೇ ಹಲ್ಲೆ ಜನಾಂಗೀಯ ಹಲ್ಲೆಗಳಲ್ಲ ಎಂದು ಸ್ಪಷ್ಟಪಡಿಸಿದ ಗೃಹ ಸಚಿವರು, ಹಲ್ಲೆ ಮಾಡಿದವರ ಮೇಲೆ ಪೋಲಿಸರು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದಿದ್ದಾರೆ.
"ಈ ಹಿಂದಿನ ಕೃತ್ಯಗಳಲ್ಲೂ, ಆಪಾದಿತರ ಮೇಲೆ ಪೋಲಿಸರು ರೌಡಿ ಕಾಯ್ದೆಯಡಿ ಕೇಸ್ ಹಾಕಿದ್ದು, ಜನಾಂಗೀಯ ನಿಂದನೆಯ ಯಾವುದೇ ಕೃತ್ಯ ಜರುಗಿಲ್ಲ" ಎಂದಿದ್ದಾರೆ.