ಜೆಡಿಎಸ್‌ನಲ್ಲಿ ಭಿನ್ನಮತ ಇರುವುದು ನಿಜ: ಎಚ್‌ಡಿಕೆ
ಜಾತ್ಯತೀತ ಜನತಾ ದಳದಲ್ಲಿ ಭಿನ್ನಮತ ಮತ್ತೆ ಸ್ಫೋಟಗೊಂಡಿದ್ದು, ಪಕ್ಷದಲ್ಲಿ ಭಿನ್ನಮತ ಇರುವುದು ನಿಜ ಎಂದು ಮಾಜಿ ...
ಬೆಂಗಳೂರು: ಜಾತ್ಯತೀತ ಜನತಾ ದಳದಲ್ಲಿ ಭಿನ್ನಮತ ಮತ್ತೆ ಸ್ಫೋಟಗೊಂಡಿದ್ದು, ಪಕ್ಷದಲ್ಲಿ ಭಿನ್ನಮತ ಇರುವುದು ನಿಜ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಬುಧವಾರ ಒಪ್ಪಿಕೊಂಡಿದ್ದಾರೆ.
ತಮ್ಮ ಹಿಂದಿನ 'ಆಪ್ತಮಿತ್ರ' ಜಮೀರ್ ಅಹಮದ್ ಖಾನ್ ಅಸಮಾಧಾನದ ಬಗ್ಗೆ ಮತ್ತು ಇಂದಿನ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಗೆ ಅವರು ಗೈರು ಆಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಜೆಡಿಎಸ್‌ನಲ್ಲಿ ಭಿನ್ನಮತ ಇರುವುದು ನಿಜ, ಅದನ್ನು ಸರಿಪಡಿಸಲು ಇಂದು ಜೆಡಿಎಲ್‌ಪಿ ಸಭೆ ಕರೆಯಲಾಗಿದೆ. ಇದಕ್ಕೆ ಜಮೀರ್ ಅಹಮದ್ ಅವರಿಗೂ ಆಹ್ವಾನ ನೀಡಲಾಗಿದೆ ಎಂದರು. ಆದರೆ ಅವರು ತಮಗೆ ಆಹ್ವಾನ ಬಂದಿಲ್ಲ ಎನ್ನುತ್ತಿದ್ದಾರೆ. ಅವರಿಗೆ ಉರ್ದು ಅಥವಾ ಇಂಗ್ಲಿಷ್‌ನಲ್ಲಿ ಆಹ್ವಾನ ನೀಡಬೇಕಾಗಿತ್ತು ಅಂತ ಕಾಣುತ್ತೆ ಎಂದು ತಿರುಗೇಟು ನೀಡಿದರು. ಅಲ್ಲದೆ ಅವರು ಪಕ್ಷ ಬಿಡುವುದಾದರೆ ಅವರಿಗೆ ಸನ್ಮಾನ ಮಾಡಿ ಕಳುಹಿಸಿ ಕೊಡುವುದಾಗಿ ತಿಳಿಸಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಗೆ ನನಗೆ ಆಮಂತ್ರಣ ಬಂದಿಲ್ಲ. ಮಾಧ್ಯಮಗಳಿಂದ ವಿಷಯ ಗೊತ್ತಾಯಿತು. ಈಗ ನನ್ನನ್ನು ಕರೆದರೂ ನಾನು ಹೋಗುವುದಿಲ್ಲ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೇ ಪಕ್ಷದ ನಾಯಕರಲ್ಲಿ ಅಸಮಾಧಾನ ಇದೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಇಂತಹ ಸಮಯದಲ್ಲ ಅಂತಹ ನಾಯಕರನ್ನು ಕರೆದು, ವೈಯಕ್ತಿಕವಾಗಿ ಮಾತನಾಡಿಸಿ ಅಸಮಾಧಾನ ಪರಿಹರಿಸುವ ಕಾರ್ಯವನ್ನು ಎಚ್‌ಡಿಕೆ ಮಾಡಬಹುದಿತ್ತು. ಎಲ್ಲ ಶಾಸಕರನ್ನೂ ಒಟ್ಟಿಗೆ ಕರೆದರೆ ಮಾತನಾಡಲು ಸಾಧ್ಯವಾಗುವುದಿಲ್ಲ. ವೈಯಕ್ತಿಕ ಮಾತುಗಳನ್ನು ಅಲ್ಲಿ ಹೇಳಲು ಸಾಧ್ಯವಾಗದು ಎಂದು ನಿನ್ನೆ ಜಮೀರ್ ಖಾನ್ ಹೇಳಿಕೆ ನೀಡಿದ್ದರು.
ಬೆಂಗಳೂರಿನ ಚಾನ್ಸರಿ ಪೆವಿಲಿಯನ್ ಹೋಟೆಲ್‌ನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದ್ದು, ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್, ವಿಧಾನಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ, ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಜೀಂ, ಹಿರಿಯ ನಾಯಕ ಇಕ್ಬಾಲ್ ಅನ್ಸಾರಿ, ಎಚ್.ಡಿ.ರೇವಣ್ಣ, ಎಚ್.ಎಸ್.ಶಿವಶಂಕರ, ಸಾ.ರಾ ಮಹೇಶ ಸೇರಿದಂತೆ ಹಲವು ನಾಯಕರು ಸಭೆಯಿಂದ ದೂರವುಳಿದಿದ್ದಾರೆ.