ಸ್ಸಾರಿಗೆ ಈಗ ಬಂದಿದೆ ನೈಜ ಬೆಲೆ!
ಮನೆಯ ಕಾರ್ಯಕ್ರಮಕ್ಕೆ ತಮ್ಮ ಪರವಾಗಿ...
ಬೆಂಗಳೂರು: ಮನೆಯ ಕಾರ್ಯಕ್ರಮಕ್ಕೆ ತಮ್ಮ ಪರವಾಗಿ ಹೋಗಿ ಕರೆದು ಬರುವವರಿದ್ದಾರೆ. ಬಂದವರನ್ನು ತಮ್ಮ ಪರವಾಗಿ ಸ್ವಾಗತಿಸಿ ಉಪಚರಿಸುವವರೂ ಇದ್ದಾರೆ. ತಮ್ಮ ಪರವಾಗಿ ಹಣಕಾಸು ನಿಭಾಯಿಸುವವರು, ಷೇರು ವ್ಯಾಪಾರ ಮಾಡುವವರಂತೂ ಸಾಮಾನ್ಯ. ಕೆಲ ಸಮಯದ ಹಿಂದೆ ಹಿಂದಿಯಲ್ಲಿ ಸೋನಾ ಸ್ಪಾ ಎಂಬ ಸಿನಿಮಾ ಬಂದಿತ್ತು. ಅದರಲ್ಲಿ ನಿದ್ರೆ ಮಾಡಲು ಪುರುಸೊತ್ತಿಲ್ಲದವರ ಪರವಾಗಿ ನಿದ್ರೆ ಮಾಡುವ ಜನರಿರುವ ಹೊಸ ಕಲ್ಪನೆ ಬಿತ್ತಲಾಗಿತ್ತು.
ಇದೆಲ್ಲ ಹಳತಾಯಿತು ಬಿಡಿ. ಇದೀಗ ಜಪಾನ್ನಲ್ಲಿ ನಿಮ್ಮ ಪರ ಸಾರಿ ಕೇಳಲೂ ಓಜೆನ್ಸಿಗಳು ಹುಟ್ಟಿಕೊಂಡಿವೆ!
ನೀವು ಯಾರನ್ನೂ ನೋಯಿಸಿದ್ದೀರಿ ಅಥವಾ ಯಾರೊಂದಿಗೋ ಜಗಳ ಮಾಡಿಕೊಂಡಿದ್ದೀರಿ. ಆದರೆ ಅವರನ್ನು ಭೇಟಿ ಮಾಡೋಕೆ, ಸಾರಿ ಕೇಳೋಕೆ ನಿಮಗೆ ಇಗೋ ಅಡ್ಡಬರುತ್ತಿದೆ. ಬೇಸರ ಮಾಡಿದ ವ್ಯಕ್ತಿ ನೇರ ಭೇಟಿಗೆ ಅವಕಾಶ ನೀಡದೆಯೂ ಇರಬಹುದು.
ಅಂತಹ ಸಂದರ್ಭದಲ್ಲಿ ಈ ಸಂಸ್ಥೆಯ ಜನ ನಿಮ್ಮ ಪರವಾಗಿ ಆ ವ್ಯಕ್ತಿಯನ್ನು ಭೇಟಿ ಮಾಡಿ, ಸಾರಿ ಕೇಳುತ್ತಾರಂತೆ! ಅಷ್ಟೇ ಅಲ್ಲ, ಬೇಕು ಅಂದ್ರೆ ನಿಮ್ಮ ಪರವಾಗಿ ನಿಮ್ಮನ್ನೂ ಮೀರಿಸುವಂತೆ ಬೋರೆಂದು ಅತ್ತು ಸಾರಿ ಕೇಳಲೂ ಅವರ ಬಳಿ ಜನ ಇದ್ದಾರಂತೆ!
ಹಾಗೆ ಅವರು ಸಾರಿ ಕೇಳಿದ್ದಕ್ಕೆ ನೀವು ದುಡ್ಡು ಕೊಡಬೇಕು. ದುಡ್ಡು ಕೊಡದೇ ಸಾರಿ ಹೇಳೋದಕ್ಕೆ ಮಾತ್ರ ಅವಕಾಶವಿಲ್ಲ!
ಜಪಾನ್ನಲ್ಲಿ ಸಾರಿ ಕೇಳುವುದಕ್ಕೆಂದೇ ಮೂರು ಕಂಪನಿಗಳು(Shazaiya Aiga Pro Yokohama Benriya Natchan, nihon Shazia Daikokao) ಹುಟ್ಟಿಕೊಂಡಿವೆಯಂತೆ! ಸಾರಿ ಕೇಳುವ ನಿಮ್ಮ ಅಗತ್ಯಕ್ಕೆ ತಕ್ಕಂತೆ ದರ ಕೂಡ ನಿಗದಿಯಾಗುತ್ತೆ.
ಮುಖತಃ ಹೋಗಿ ಸಾರಿ ಕೇಳಬೇಕೆಂದರೆ 240 ಡಾಲರ್. ಇನ್ನು ಅತ್ತು ಸಾರಿ ಕೇಳಬೇಕು, ಅವರ ಜತೆ ಕಾಫಿ ಹೀರುತ್ತಾ ಸಾರಿ ಕೇಳಬೇಕು, ತಾಸುಗಟ್ಟಲೆ ಮಾತನಾಡಿ ಸಾರಿ ಕೇಳಿ ಸಮಸ್ಯೆ ಇತ್ಯರ್ಥ ಮಾಡಬೇಕು ಎಂದಾದರೆ ಅವಕ್ಕೆಲ್ಲ ಬೇರೆ ಬೇರೆ ದರವಿದೆ. ಅಂತಹ ಸಂದರ್ಭದಲ್ಲಿ ತಾಸಿಗೆ 33 ಡಾಲರ್ ದರ ನಿಗದಿ ಮಾಡಲಾಗಿದೆ. ಈ ಕಂಪನಿಯಲ್ಲಿ ಕೆಲಸ ಮಾಡುವ ವ್ಯಕ್ತಿಯ ಪ್ರಕಾರ, ಹೆಚ್ಚಿನ ಪ್ರಕರಣಗಳು ಪ್ರೀತಿ, ಪ್ರೇಮ ಮತ್ತು ಹಣಕ್ಕೆ ಸಂಬಂಧಿಸಿದವು.
ಅಂತಹ ಸಂದರ್ಭಗಳಲ್ಲಿ ಈ ಕಂಪನಿ ಉದ್ಯೋಗಿಗಳು ಯಾರು ಸಾರಿ ಕೇಳಲು ಬಯಸುತ್ತಾರೋ ಅವರ ತಂದೆ, ತಾಯಿ, ತಂಗಿ ಹಾಗೂ ಅಣ್ಣ ಮುಂತಾದರ ಸೋಗಿನಲ್ಲಿ ಹೋಗಿ ಸಾರಿ ಕೇಳಿ ಸಮಸ್ಯೆ ಇತ್ಯರ್ಥಗೊಳಿಸುತ್ತಾರೆ. ಆಶ್ಟರ್ಯವೆಂದರೆ ಇಂತಹ ಕಂಪನಿಗಳಿಗೆ ಬರುವ ಗ್ರಾಹಕರಲ್ಲಿ ಶೇ.60ರಷ್ಟು ಹೆಂಗಸರಂತೆ! ಅದರಲ್ಲೂ 20-40 ವರ್ಷದವರೇ ಹೆಚ್ಚಂತೆ. ಎಲ್ಲ ಸಂದರ್ಭಗಳಲ್ಲೂ ಸಮಸ್ಯೆ ಇತ್ಯರ್ಥವಾಗದಿದ್ದರೂ ಸಾರಿ ಕೇಳಿದ ನೆಮ್ಮದಿಯಂತೂ ದೊರೆಯುತ್ತದೆ. ಕೆಲವು ಸಮಯದ ನಂತರ ಎಲ್ಲೋ ಆಕಸ್ಮಿಕ ಭೇಟಿಯಲ್ಲಿ ಮತ್ತೆ ಸಂಬಂಧ ಸುಧಾರಿಸುವ ಅವಕಾಶ ಇರುತ್ತದೆ ಎಂಬುದು ಅವರು ವಾದ.
ಇಂತಹ ಕಂಪನಿಗಳ ವಿರುದ್ಧ ಮಾತನಾಡುವವರಿಗೂ ಕೊರತೆಯಿಲ್ಲ. ಇಂತಹ ವ್ಯವಹಾಗಳು ಮುಂದೊಂದು ದಿನ ಕೆಲವು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು ಎಂಬುದು ಅವರ ವಾದ. ಆದರೆ ಈವರೆಗೆ ಅಂತಹ ಅನಾಹುತಗಳೇನೂ ಸಂಭವಿಸಿಲ್ಲ ಎಂಬುದು ಕಂಪನಿಗಳ ಸಮಜಾಯಿಷಿ. ಆದರೆ ಹೀಗೆ ಸಾರಿ ಕೇಳಲು ಹೋದಾಗ ಪೆಟ್ಟುಕೊಟ್ಟರೆ ಅದಕ್ಕೆ ಹೆಚ್ಚುವರಿ ದುಡ್ಡು ಕೊಡಬೇಕಾ ಎಂಬುದು ಮಾತ್ರ ಸ್ಪಷ್ಟವಾಗಿಲ್ಲ!
-ವಿನಾಯಕ ಭಟ್ಟ ಮೂರೂರು