ಉತ್ತಮ ವಿದ್ಯಾರ್ಥಿಗಳು ಉತ್ತಮ ಶಿಕ್ಷಕರಾಗಲು ಬಯಸಿ: ಮೋದಿ
ನವದೆಹಲಿ: ದೇಶದಲ್ಲಿ ಉತ್ತಮ ಶಿಕ್ಷಕರ ಅವಶ್ಯಕತೆಯಿದೆ. ಉತ್ತಮ ವಿದ್ಯಾರ್ಥಿಗಳು ಉತ್ತಮ ಶಿಕ್ಷಕರಾಗಲು ಬಯಸಬೇಕು ಎಂದು ಪ್ರಧಾನಿಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಶಿಕ್ಷಕರ ದಿನಾಚರಣೆ ಅಂಗವಾಗಿ ದೆಹಲಿಯ ಮಾಣಿಕ್ ಷಾ ಆಡಿಟೋರಿಯಂನಲ್ಲಿ ದೇಶದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ್ದು ಪ್ರಧಾನಿ ಮೋದಿ, ದೇಶದ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಿರುವುದು ನನ್ನ ಸೌಭಾಗ್ಯ. ಭಾರತದ ಭಾವಿ ಕನಸುಗಳೊಂದಿಗೆ ಮಾತನಾಡುವ ಅವಕಾಶ ನನಗೆ ಸಿಕ್ಕಿದೆ ಅದಕ್ಕೆ ನಾನು ಅಭಾರಿ ಎಂದರು.
ಒಂದು ಕಾಲದಲ್ಲಿ ಶಿಕ್ಷಕರ ಬಗ್ಗೆ ಅಪಾರ ಗೌರವವಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಹೆಚ್ಚಿನ ವಿದ್ಯಾರ್ಥಿಗಳು ವೈದ್ಯರು, ಇಂಜಿನಿಯರಿಂಗ್ ಆಗಲು ಬಯಸುತ್ತಾರೆ ಹೊರತು ಶಿಕ್ಷಕರನ್ನಾಗಲು ಬಯಸುವುದಿಲ್ಲ. ಇಂತಹ ಮನಸ್ಥಿತಿಯನ್ನು ಬದಲಾಯಿಸಬೇಕು. ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರದ್ದು ಮಹತ್ವದ ಪಾತ್ರವಿರುತ್ತದೆ ಹೀಗಾಗಿ ವಿದ್ಯಾರ್ಥಿಗಳಲ್ಲಿ ಉತ್ತಮ ಶಿಕ್ಷಕರಾಗುವ ಆಸೆಯನ್ನು ಹುಟ್ಟು ಹಾಕಬೇಕು ಎಂದರು.
ಗೂಗಲ್ ಮೇಲೆ ಹೆಚ್ಚು ಅವಲಂಬಿತರಾಗಬೇಡಿ. ಗೂಗಲ್ ಗುರುವಿನಿಂದ ನಿಮಗೆ ಮಾಹಿತಿಯಷ್ಟೆ ಸಿಗುತ್ತದೆ ಅದರೆ, ಜ್ಞಾನ ಸಿಗುವುದಿಲ್ಲ. ಸರಿ ತಪ್ಪಿನ ಅರಿವು ಪಡೆಯಲು ಸಾಧ್ಯವಿಲ್ಲ ಎಂದು ಮೋದಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.