ಕಣಿವೆ ರಾಜ್ಯದಲ್ಲಿ ಸೊಕ್ಕಿ ಸುರಿದು ಸೋತ ಮಳೆ
ಕಾಶ್ಮೀರ ಕಣಿವೆಯಲ್ಲಿ ಮಳೆಯ ಅಬ್ಬರ ಕಡಿಮೆಯಾಗುತ್ತಿದ್ದಂತೆ ಪರಿಹಾರ ಕಾರ್ಯಾಚರಣೆ ವೇಗ ಪಡೆದುಕೊಂಡಿದೆ...
ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಮಳೆಯ ಅಬ್ಬರ ಕಡಿಮೆಯಾಗುತ್ತಿದ್ದಂತೆ ಪರಿಹಾರ ಕಾರ್ಯಾಚರಣೆ ವೇಗ ಪಡೆದುಕೊಂಡಿದೆ.
ಪ್ರತಿಕೂಲ ಹವಾಮಾನದಿಂದಾಗಿ ದುರ್ಗಮ ಪ್ರದೇಶಗಳಲ್ಲಿ ಹಾರಾಟ ನಡೆಸಲು ಒದ್ದಾಡುತ್ತಿದ್ದ ಸೇನಾ ಹೆಲಿಕಾಫ್ಟರ್‌ಗಳು ಈಗ ನಿರಾಂತಕ ಓಡಾಟ ಆರಂಭಿಸಿವೆ. ಮಂಗಳವಾರವೊಂದೇ ದಿನ ಸುಮಾರು 25 ಸಾವಿರ ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದಂತಾಗಿದೆ. ಅಧಿಕಾರಿಗಳ ಪ್ರಕಾರ ಪ್ರವಾಹದಿಂದಾಗಿ ಏಳು ಲಕ್ಷ ಮಂದಿ ವಿವಿಧ ಹಂತಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.
ಈ ಮಧ್ಯೆ, ರಕ್ಷಣಾ ಕಾರ್ಯದ ನಡುವೆ ಮೊಬೈಲ್, ದೂರವಾಣಿ, ವಿದ್ಯುತ್ ಹಾಗೂ ರಸ್ತೆ ಸಂಪರ್ಕಗಳನ್ನು ಮರುಸ್ಥಾಪಿಸುವ ಕೆಲಸವನ್ನೂ ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ಜಮ್ಮು ಹಾಗೂ ಕಾಶ್ಮೀರವನ್ನು ಜೋಡಿಸುವ ಲೆಹ್ ಮತ್ತು ಶ್ರೀನಗರ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಪುನಾರಂಭವಾಗಿದೆ.
ಭೂಕುಸಿತ, ಪ್ರವಾಹದಿಂದಾಗಿ ಈ ಹೆದ್ದಾರಿ ಐದು ದಿನಗಳಿಂದ ಬಂದ್ ಆಗಿತ್ತು. ನೂರಾರು ವಾಹನಗಳು ಹೆದ್ದಾರಿಯಲ್ಲೇ ಸಾಲುಗಟ್ಟಿ ನಿಂತಿದ್ದವು. ವಾಹನ ಸಂಚಾರ ಪುನಾರಂಭಗೊಂಡಿರುವುದರಿಂದ ಕಾಶ್ಮೀರಕ್ಕೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಆಗುತ್ತಿದ್ದ ವ್ಯತ್ಯಯಕ್ಕೆ ಕೊನೆ ಬಿದ್ಧಂತಾಗಿದೆ.