ಸಾವಿರಾರು ಭಾವನೆಗಳ ಬಂಧಿಸಬಲ್ಲಿರಾ?
ಕಾರವಾರ: ಚಾತುರ್ಮಾಸ್ಯ ಪೂರ್ಣ ಮಾಡುವುದು ನಮ್ಮ ಸಂಕಲ್ಪವಾಗಿದ್ದರೆ ಅದನ್ನು ಭಂಗ ಮಾಡುವುದು ಅವರ ಸಂಕಲ್ಪವಾಗಿತ್ತು. ಆದರೆ, ಇದಾವುದೂ ಅವರ ಕೈಯಲ್ಲಿಲ್ಲ. ಅದು ರಾಮನ ನಿರ್ಣಯದಂತೆ ಪೂರ್ಣವಾಗಿದೆ.
ಚಾತುರ್ಮಾಸ್ಯಕ್ಕೆ ಬಂದಾಗ ಚತ್ರವ್ಯೂಹದ ಮಧ್ಯೆ ಇದ್ದೆವು. ಅದನ್ನೀಗ ಭೇದಿಸಿಯಾಗಿದೆ. ಮುಂದಿರುವುದು ಸಂಗ್ರಾಮ. ಯೋಧನಿಗೂ, ಯೋಗಿಗೂ ಹೋಲಿಕೆ ಇದೆ. ಯೋಧ ಹೇಗೆ ಯುದ್ಧದಲ್ಲಿ ಬೆನ್ನು ತೋರುವುದಿಲ್ಲವೋ ಹಾಗೆ ಯೋಗಿಯೂ ಸತ್ಯದ ಪರ ಹೋರಾಡುವಾಗ ಮೌನವಾಗಿರುವುದಿಲ್ಲ. ಸಂಗ್ರಾಮದಲ್ಲಿ ಸತ್ತರೆ ಸ್ವರ್ಗ, ಬದುಕಿದರೆ ಭೂಮಿಯನ್ನೇ ಸ್ವರ್ಗ ಮಾಡಬಹುದು...
ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ, ತಮ್ಮ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯಿಸಿದ ಪರಿ ಇದು. ತಮ್ಮ ಜಯ ಚಾತುರ್ಮಾಸ್ಯದ ಅಂಗವಾಗಿ ಚಂದಾವರದ ಆಂಜನೇಯ ದೇವಾಲಯಕ್ಕೆ ಭೇಟಿ ನೀಡುವ ಮೂಲಕ ಸೀಮೋಲ್ಲಂಘನ ಮಾಡಿ, ಹೊನ್ನಾವರ ತಾಲೂಕಿನ ಕೆಕ್ಕಾರು ಮಠದಲ್ಲಿ ನಡೆದ ಸಭೆಯಲ್ಲಿ ಆಶೀರ್ವಚನ ನೀಡಿದರು.
* ಬಂಧಿಸ ಹೊರಟವರಿಗೆ- ಈ ಸಾವಿರ ಸಾವಿರ ಜನರ ಭಾವನೆಗಳ ಬಂಧಿಸಬಲ್ಲಿರಾ?
* ನಾವು ಅಮೃತ ಕೊಟ್ಟೆವು. ಆದರವರಲ್ಲಿ ಅಮೃತವಿಲ್ಲ, ತಮ್ಮಲ್ಲಿರುವುದನ್ನೇ ಕೊಟ್ಟರು!
* ನಿಷ್ಕಳಂಕ ಪೀಠವನ್ನು ಸೆರೆಯೊಳಗಿಡಲು ಪ್ರಯತ್ನಿಸಿದವರು ಇಂದು ಸೆರೆಯಲ್ಲಿದ್ದಾರೆ.
* ರಾಮನ ಸಾಕ್ಷಿಯಾಗಿ ಹೆಚ್ಚೆಗಳನ್ನಿಟ್ಟಿದ್ದೇವೆ. ನಾವಿಟ್ಟ ಹೆಜ್ಜೆಗಳು ರಾಮನ ಹೆಜ್ಜೆಗಳು.
* ಬಟ್ಟೆ ತುದಿಗೆ ಅಂಟಿದ ಕಸ ಕೊಡವಬೇಕೆವಿನಾ, ಕಸ ಹೋಯ್ತಲ್ಲ ಎಂದು ಮರುಗಬಾರದು.
* ಸಾವಿರಾರು ಜನ ಹೊರಗೆ ಕಾಯುತ್ತಿದ್ದಾರೆ, ನಾನು ಹೊರಬರದಿರಲು ಸಾಧ್ಯವೇ ಇಲ್ಲ.
* ಉಪಕರಿಸಲು ಸಿದ್ಧವಿರುವ ಗೋವನ್ನು ಕಟುಕರಿಗೆ ಕೊಡಲು ಮುಂದಾದವರಿಗೆ ಏನನ್ನಬೇಕು?
* ಕೆಡಕು ಮಾಡಿಲ್ಲ, ಕೆಡಕು ಬಯಸ್ತಿಲ್ಲ, ಅದಕ್ಕೆ ಅವರು ಈ ಉಡುಗೊರೆ ಕೊಟ್ಟರು.
* ನೀ ಯಾರಿಗಾದೆ ಎಲೆ ಮಾನವ ಎಂದು ನಾನು ಅವರನ್ನು ಕೇಳಬೇಕಾಗಿದೆ.
* ಈ ಯುದ್ಧದಲ್ಲಿ ನೀನು ಗೆದ್ರೆ ನೀನೇ ಸೋತೆ, ನೀ ಸೋತರೆ ನೀನೇ ಸತ್ತೆ
* ನನಗೆ ಏನನ್ನಿಸುತ್ತೋ ಅದೇ ಸತ್ಯ ಅಂಥ ತಿಳಿದುಕೊಳ್ಳಬಾರದು
* ನನ್ನ ಮೇಲಿನ ಅಂದಿನ ಭಾವನೆ, ಇಂದೂ ಹಾಗೇ ಇದೆ, ಅದು ತಪ್ಪಾ?
* ನಾವೆಲ್ಲಾ ಒಂದಾಗಿರೋಣ, ಬಂದದ್ದೆಲ್ಲಾ ಎದುರಿಸೋಣ, ಅದೇನು ಬರುತ್ತೋ ಬರಲಿ
* ನಮ್ಮ ಆಸ್ತಿ ಅಂದ್ರೆ ಪ್ರೀತಿ, ಕೊನೆಗೆ ಸತ್ಯವೊಂದೇ ಉಳಿಯೋದು.