ಸಿಎಂಗೆ ಮತ್ತೊಂದು ಡಿನೋಟಿಫಿಕೇಷನ್ ಕಳಂಕ
ಸಿದ್ದರಾಮಯ್ಯ ಅವರನ್ನು ಡಿನೋಟಿಫಿಕೇಷನ್ ಭೂತ ಅತಿಯಾಗಿ ಕಾಡಲಾರಂಭಿಸಿದೆ.
ಬೆಂಗಳೂರು: ಸಿದ್ದರಾಮಯ್ಯ ಅವರನ್ನು ಡಿನೋಟಿಫಿಕೇಷನ್ ಭೂತ ಅತಿಯಾಗಿ ಕಾಡಲಾರಂಭಿಸಿದೆ.
ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಮುಜುಗರಕ್ಕೊಳಗಾಗಿದ್ದ ಸಿದ್ದರಾಮಯ್ಯ ವಿರುದ್ಧ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮತ್ತೊಂದು ಆರೋಪ ಮಾಡಿದ್ದಾರೆ. ಅರ್ಕಾವತಿ ಬಡಾವಣೆ ಮಾದರಿಯಲ್ಲೇ ಡಾ.ಕೆ. ಶಿವರಾಮ ಕಾರಂತ ಬಡಾವಣೆಯಲ್ಲಿ ನೂರಕ್ಕೂ ಅಧಿಕ ಎಕರೆ ಭೂಮಿ ಡಿನೋಟಿಫೈ ಮಾಡಲಾಗಿದೆ. ಈ ಸಂಬಂಧ 4 ಎಕರೆ 6 ಗುಂಟೆ ಜಮೀನಿನ ಡಿನೋಟಿಫೈ ಕುರಿತ ದಾಖಲೆಗಳು ದೊರೆತಿವೆ. ಉಳಿದ ದಾಖಲೆಗಳನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಹೈಕೋರ್ಟ್ ಆದೇಶದ ನೆಪ ಹೇಳಿಕೊಂಡು 120 ಎಕರೆಗೂ ಹೆಚ್ಚು ಪ್ರಮಾಣದ ಭೂಮಿಯನ್ನು ಅರ್ಕಾವತಿ ಬಡಾವಣೆಯಲ್ಲಿ ಸಿದ್ದರಾಮಯ್ಯ ಅವರು ಡಿನೋಟಿಫೈ ಮಾಡಿದ್ದರು. ಈಗ ಶಿವರಾಮ ಕಾಂತರ ಬಡಾವಣೆಯ ಸರ್ವೆ ನಂ 23ರಲ್ಲಿನ 4 ಎಕರೆ 6 ಗುಂಟೆ ಪ್ರದೇಶವನ್ನು ಭೂಸ್ವಾಧಿನದಿಂದ ಕೈಬಿಡಲು ನಿರ್ಧರಿಸಲಾಗಿದೆ. ಈ ಸಂಬಂಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಉಪ ಆಯುಕ್ತರು ಆದೇಶ ಹೊರಡಿಸಿದ್ದಾರೆ ಎಂದು ದಾಖಲೆ ಸಮೇತ ಅವರು ಬಹಿರಂಗಗೊಳಿಸಿದ್ದಾರೆ.
ಶಿವರಾಮ ಕಾರಂತ ಬಡಾವಣೆಗೆ 2008ರ ಡಿ. 30ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಏ. 2ರಂದು ಬಿ.ಎಸ್. ಪ್ರಸನ್ನಕುಮಾರ್ ಎಂಬುವವರು ವಿಶೇಷ ಭೂ ಸ್ವಾದೀನದಿಂದ ಕೈಬಿಡುವ ಕುರಿತಂತೆ ಹಿಂಬರಹ ನೀಡಿದ್ದಾರೆ. ಹಿಂಬರಹ ಈ ರೀತಿಯಿದೆ, ಬೆಂಗಳೂರು ಉತ್ತರ ತಾಲೂಕು ಯಲಹಂಕ ಹೋಬಳಿ ಶ್ಯಾಮರಾಜಪುರ ಗ್ರಾಮದ ಸರ್ವೆ ನಂ. 23ರಲ್ಲಿ ಡಾ.ಕೆ. ಶಿವರಾಮ ಕಾರಂತ ಬಡಾವಣೆ ರಚನೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿರುವ ಜಮೀನಿನ ಪೈಕಿ ಆಕ್ಷೇಪಣೆದಾರರಿಗೆ ಸೇರಿದ 4 ಎಕರೆ 6 ಗುಂಟೆ ಜಮೀನಿನ ಚಕ್ಕುಬಂದಿಯನ್ನು ಉಲ್ಲೇಖಿಸಿ, ಸದರಿ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಮುಂದುವರಿಸಬಾರದೆಂದು ಅಭಿಪ್ರಾಯಿಸಿ, ಆದೇಶ ಹೊರಡಿಸಿರುತ್ತಾರೆ. ಅದರಂತೆ ಈ ಜಮೀನಿಗೆ ಸಂಬಂಧಿಸಿ ಡಾ. ಶಿವರಾಮ ಕಾರಂತ ಬಡಾವಣೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಾಧಿಕಾರ ಮುಂದುವರಿಸುವುದಿಲ್ಲವೆಂದು ತಿಳಿಸಲಾಗಿದೆ.
ಇದೇ ರೀತಿ 100ಕ್ಕೂ ಅಧಿಕ ಎಕರೆ ಭೂಮಿಯನ್ನು ಡಿನೋಟಿಫೈ ಮಾಡಿದ ಬಗ್ಗೆ ಮಾಹಿತಿ ಬಂದಿದೆ. ಡಿನೋಟಿಫೈ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಅಧಿಕಾರಕ್ಕೇರಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇವಲ ಡಿನೋಟಿಫೈನಲ್ಲೇ ಮುಳುಗಿಹೋಗಿದ್ದಾರೆ.
ಬಿಲ್ಡರ್ಗಳ ಲಾಬಿಗೆ ಮಣಿಯುತ್ತಿದ್ದಾರೆ. ಭವಿಷ್ಯದಲ್ಲಿ ಬೆಂಗಳೂರಿಗರಿಗೆ ನಿವೇಶನವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಜಗದೀಶ್ ಶೆಟ್ಟರ್ ಆರೋಪಿಸಿದರು.
ಮುಂದುವರಿದ ಅರ್ಕಾವತಿ ಬಡಾವಣೆ ಅಕ್ರಮ: ಅರ್ಕಾವತಿ ಡಿನೋಟಿಫೈ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಆದರೆ ಪ್ರಕರಣದ ದಿಕ್ಕು ತಪ್ಪಿಸಲು ಹಾಗೂ ಅಕ್ರಮ ಫಲಾನುಭವಿಗಳ ನೆರವಿಗಾಗಿ ಪಹಣಿ ವರ್ಗಾಯಿಸಲಾಗುತ್ತಿದೆ ಎಂದು ಆರೋಪಿಸಿರುವ ಜಗದೀಶ್ ಶೆಟ್ಟರ್, ಈ ಸಂಬಂಧ ತಹಶೀಲ್ದಾರ್ ಹಾಗೂ ಉಪ ಆಯುಕ್ತರು ಹೊರಡಿಸಿರುವ ಆದೇಶ ಪ್ರತಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು. ತನಿಖೆ ನಡೆಯುತ್ತಿರುವಾಗ ಯಥಾಸ್ಥಿತಿ ಕಾಪಾಡಿಕೊಳ್ಳದಷ್ಟು ಒತ್ತಡದಲ್ಲಿ ಮುಖ್ಯಮಂತ್ರಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶೆಟ್ಟರ್ ಹೇಳಿದರು.
ಶೆಟ್ಟರ್ಗೆ ಸಿದ್ದು ತಿರುಗೇಟು
ಬೆಂಗಳೂರು: ಕಾನೂನು ಬಾಹಿರವಾಗಿ ರಾಜ್ಯ ಸರ್ಕಾರ ಯಾವುದೇ ಡಿನೋಟಿಫಿಕೇಷನ್ ನಡೆಸಿಲ್ಲ. ಕೋತಿ ತಿಂದು ಮೇಕೆ ಮುಖಕ್ಕೆ ಒರೆಸಿತು ಎಂಬಂತೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವರ್ತಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಪಂಚಾಯತ್ ಪರಿಷತ್ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಡಿನೋಟಿಫಿಕೇಷನ್ ವಿಚಾರದಲ್ಲಿ ಯಾವುದೇ ತಪ್ಪು ಮಾಡಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಲ್ಲಿಕೆಯಾದ ವರದಿ ಆಧಾರದ ಮೇಲೆ ನ್ಯಾಯಾಲಯದ ಸೂಚನೆ ಮೇರೆಗೆ ಡಿನೋಟಿಫಿಕೇಷನ್ ಮಾಡಲಾಗಿದೆ ಎಂದರು.