ಸಿಬಿಐ ನಿದೇಶಕರನ್ನು 54 ಬಾರಿ ಭೇಟಿ ಮಾಡಿದ್ದ ರೆಡ್ಡಿ ಪರ ವಕೀಲ
ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಅವರ ಮನೆಗೆ ದೇಶದ ಪ್ರಮುಖ ಹಗರಣಗಳ ಪ್ರಮುಖರು ಭೇಟಿ ನೀಡಿದ್ದಾರೆ ಎಂಬ ಮಾಹಿತಿ..
ನವದೆಹಲಿ: ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಅವರ ಮನೆಗೆ ದೇಶದ ಪ್ರಮುಖ ಹಗರಣಗಳ ಪ್ರಮುಖರು ಭೇಟಿ ನೀಡಿದ್ದಾರೆ ಎಂಬ ಮಾಹಿತಿ ಬಹಿರಂಗಗೊಳ್ಳುತ್ತಿದ್ದಂತೆ, ಇದೀಗ ಅಕ್ರಮ ಗಣಿಗಾರಿಕೆ ಪ್ರಕರಣದ ಪ್ರಮುಖ ಆರೋಪಿ ಮಾಜಿ ಸಚಿವ ಗಾಲಿ ಜನಾರ್ದನ್ ರೆಡ್ಡಿ ಪರ ವಕೀಲರಾಗಿದ್ದ ರಾಘವಾಚಾರ್ಯುಲು ಸಿನ್ಹಾ ಅವರ ಮನೆಗೆ ಸುಮಾರು 54 ಬಾರಿ ಭೇಟಿ ನೀಡಿರುವುದು ಬೆಳಕಿಗೆ ಬಂದಿದೆ.
ಬಹುಕೋಟಿ 2ಜಿ ತರಂಗಾಂತರ ಹಂಚಿಕೆ ಹಗರಣ ಆರೋಪಿಗಳು ರಂಜಿತ್ ಸಿನ್ಹಾ ಅವರ ಮನೆಗೆ ಭೇಟಿ ನೀಡಿದ್ದಾರೆ ಎಂದು ಆರೋಪಿಸಿ ಸುಪ್ರೀಂಕೋರ್ಟ್ನಲ್ಲಿ ಹಿರಿಯ ಪತ್ರಕರ್ತ ಹಾಗೂ ಎಎಪಿ ಮುಖಂಡ ಪ್ರಶಾಂತ್ ಭೂಷಣ್ ದೂರು ದಾಖಲಿಸಿದ್ದರು.
ಈ ಸಂಬಂಧ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದು, ಇದೇ ಸಂದರ್ಭದಲ್ಲಿ ರೆಡ್ಡಿ ಪರ ವಕೀಲರಾದ ರಾಘವಾಚಾರ್ಯುಲು ಸಿಬಿಐ ನಿರ್ದೇಶಕರ ಮನೆಗೆ ಪದೇ ಪದೆ ಭೇಟಿ ನೀಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ರಾಘವಾಚಾರ್ಯುಲು ಅವರು 2013ರಿಂದ 2014ರ ಆಗಸ್ಟ್ವರೆಗೆ ಸುಮಾರು 54 ಬಾರಿ ಭೇಟಿ ನೀಡಿದ್ದಾರೆ ಎಂಬುದು ಬಹಿರಂಗಗೊಂಡಿದೆ.
ಕಲ್ಲಿದ್ದಲು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಗೂಡ ಸಿನ್ಹಾ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಇದೀಗ ರೆಡ್ಡಿ ಪರ ವಕೀಲರು ಅವರನ್ನು ಇಷ್ಟೊಂದು ಬಾರಿ ಏಕೆ ಭೇಟಿ ಮಾಡಿದ್ದರು ಎಂಬುದು ಅನುಮಾನಗಳಿಗೆ ಕಾರಣವಾಗಿದೆ.
ಈ ಹಿಂದೆ ಜನಾರ್ದನ್ ರೆಡ್ಡಿಗೆ ಆಪ್ತ ಎಂಬ ಕಾರಣಕ್ಕಾಗಿಯೇ ರಾಘವಾಚಾರ್ಯುಲು ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಬಗ್ಗೆ ಸಿಬಿಐ ತನಿಖೆಯೂ ನಡೆದಿತ್ತು.
ರಾಘವಾಚಾರ್ಯುಲುರ ಪ್ರತಿಕ್ರಿಯೆ
ಇದಕ್ಕೆ ಸ್ಪಷ್ಟನೇ ನೀಡಿರುವ ರಾಘವಾಚಾರ್ಯುಲು, ರಂಜಿತ್ ಸಿನ್ಹಾ ಮತ್ತು ನನ್ನ ಕುಟುಂಬ ಪರಸ್ಪರ ಸ್ನೇಹಿತರು ಹೀಗಾಗಿ ಅವರ ಮನೆಗೆ ಭೇಟಿ ನೀಡಿದ್ದೇ ಇದರ ಹಿಂದೆ ಯಾವುದೇ ಉದ್ದೇಶ ಇರಲಿಲ್ಲ. ಸಿನ್ಹಾ ಅವರ ಮಗಳು ಹಾಗೂ ಮಗನನ್ನು ಕಾಣಲು ಅವ ಮನೆಗೆ ಹೋಗುತ್ತಿದ್ದೇ ಕಾರಣ ಸಿನ್ಹಾ ಮಗಳು ನನ್ನ ಅಧ್ಯಾತ್ಮ ಶಿಷ್ಯೆ. ಸಿನ್ಹಾ ಅವರ ಮಗ ರುದ್ರಾಕ್ಷ ಸಿನ್ಹಾ ಎಲ್ಎಲ್ಎಂ ಮಾಡಲು ವಿದೇಶಕ್ಕೆ ಹೋಗುವ ಮೊದಲು ನನ್ನ ಕಚೇರಿಯಲ್ಲಿ ವಕೀಲರಾಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಿದರು.
ಇನ್ನು ಜನಾರ್ದನ ರೆಡ್ದಿ ಪರ ವಕೀಲಗಿರಿ ಮಾಡಿದ್ದು 2011ರಲ್ಲಿ ಆನಂತರ ನಾನು ಸರ್ಕಾರಿ ಸ್ವಾಮ್ಯದ ಎನ್ಎಂಡಿಸಿ(ರಾಷ್ಟ್ರೀಯ ಖನಿಜ ಅಭಿವೃದ್ಧಿ ಸಂಸ್ಥೆ) ಪರವಾಗಿ ವಾದಿಸುತ್ತಿದ್ದೇನೆ ಎಂದಿದ್ದಾರೆ.