ದಿವಾಕರ್ ಶಾಸ್ತ್ರಿ ದಂಪತಿಗೆ ಷರತ್ತುಬದ್ಧ ಜಾಮೀನು
ರಾಘವೇಶ್ವರ ಭಾರತಿ ಸ್ವಾಮೀಜಿಗಳು ನಡೆಸುವ ರಾಮಕಥಾ ಕಾರ್ಯಕ್ರಮಕ್ಕೆ ಹೋಗಬಾರದು ಎಂದು ಕಲಾವಿದರಿಗೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ...
ಹೊನ್ನಾವರ: ರಾಘವೇಶ್ವರ ಭಾರತಿ ಸ್ವಾಮೀಜಿಗಳು ನಡೆಸುವ ರಾಮಕಥಾ ಕಾರ್ಯಕ್ರಮಕ್ಕೆ ಹೋಗಬಾರದು ಎಂದು ಕಲಾವಿದರಿಗೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಗಾಯಕಿ ಪ್ರೇಮಲತಾ ದಿವಾಕರ್ ಶಾಸ್ತ್ರಿ ದಂಪತಿಗಳಿಗೆ ಜಾಮೀನು ಮಂಜೂರಾಗಿದೆ.
ಪ್ರೇಮಲತಾ, ದಿವಾಕರ್ ಶಾಸ್ತ್ರಿ ಅವರು ಜಾಮೀನು ಹೊನ್ನಾವರ ಜೆಎಂಎಫ್‌ಸಿ ಕೋರಿ ಅರ್ಜಿ ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ ಕೋರ್ಟ್ ದಿವಾಕರ್ ಶಾಸ್ತ್ರಿ ದಂಪತಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಪ್ರತಿ ತಿಂಗಳ 2ನೇ ಶನಿವಾರ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಹಾಕಬೇಕು ಎಂದು ಹೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ವಿಚಾರಣೆಗೆ ಕರೆದಾಗ ಹಾಜರಾಗಬೇಕು. ಅಲ್ಲದೆ ಸಾಕ್ಷಿ ನಾಶಕ್ಕೆ ಮುಂದಾಗಬಾರದು ಎಂದು ಷರತ್ತು ವಿಧಿಸಿದ್ದು, 10 ಸಾವಿರ ರು. ವೈಯಕ್ತಿಕ ಬಾಂಡ್ ಸಲ್ಲಿಸಬೇಕು ಎಂದು ಕೋರ್ಟ್ ಹೇಳಿದೆ.
ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿಗಳು ರಾಮಕಥಾ ಮತ್ತು ಚಾತುರ್ಮಾಸ್ಯ ಕಾರ್ಯಕ್ರಮವನ್ನು ಹೊನ್ನವಾರದ ಕೆಕ್ಕಾರು ಮಠದಲ್ಲಿ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಗೀತಕಾರರಾದ ಡಾ. ಗಜಾನನ ಶರ್ಮಾ, ಗಾಯಕಿ ಶಂಕರಿ ಮೂರ್ತಿ ಬಾಳಿಲ ಮತ್ತು ಗಾಯಕಿ ದೀಪಿಕಾ ಅವರಿಗೆ ಆರೋಪಿಗಳು ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿತ್ತು.