ವಿದ್ಯುತ್ ಅಕ್ರಮಕ್ಕೆ 'ಕೊಕ್ಕೆ ಭಾಗ್ಯ'
ನೀರಾವರಿ ಪಂಪ್ಸೆಟ್ ಸಕ್ರಮಕ್ಕೆ ಸಿದ್ಧ- ಸಚಿವ ಡಿಕೆಶಿ
ಬೆಂಗಳೂರು: ರೈತರು ಮಾತ್ರವಲ್ಲದೇ ವಸತಿ, ಕೈಗಾರಿಕೆಗಳಿಗೆ ಪಡೆದಿರುವ ವಿದ್ಯುತ್ ಅಕ್ರಮ ಸಂಪರ್ಕಗಳನ್ನೂ ಕಡಿತಗೊಳಿಸಲು ಸರ್ಕಾರ ನಿರ್ಧರಿಸಿದ್ದು, ಇಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಮುಂದಾಗಿದೆ.
ರಾಜ್ಯದಲ್ಲಿ ಸುಮಾರು 7 ರಿಂದ 8 ಲಕ್ಷ ನೀರಾವರಿ ಪಂಪ್ಸೆಟ್ ಗಳ ಸಕ್ರಮಕ್ಕೆ ಸರ್ಕಾರ ಸಿದ್ಧವಿದೆ. ಪ್ರತಿ ಸಂಪರ್ಕಕ್ಕೆ 1.5 ಲಕ್ಷ ವೆಚ್ಚ ಮಾಡಲೂ ನಿರ್ಧರಿಸಲಾಗಿದೆ. ರೈತರು ಮೊದಲು 10 ಸಾವಿರ ರುಪಾಯಿ ನೀಡಿ ಅರ್ಜಿ ಸಲ್ಲಿಸಬೇಕು. ಯಾರು ಅಜಿಂ ಸಲ್ಲಿಸುವುದಿಲ್ಲವೋ ಅಂಥವರ ವಿದ್ಯುತ್ ಸಂಪರ್ಕ ಕಡಿತಗೊಳಿವುದಲ್ಲದೆ ಅವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಸುದ್ದಿಗಾರರಿಗೆ ಗುರುವಾರ ತಿಳಿಸಿದ್ದಿಷ್ಟು: ರೈತರ ಪಂಪ್ಸೆಟ್ಗಳಿಗೆ ಶೇ.37ರಷ್ಟು ವಿದ್ಯುತ್ ಬಳಕೆಯಾಗುತ್ತಿದೆ. ಸರ್ಕಾರ ಸುಮಾರು ಏಳು ಸಾವಿರ ಕೋಟಿ ರುಪಾಯಿ ವೆಚ್ಚ ಮಾಡುತ್ತಿದೆ. ಆದರೆ, ಸಂಪರ್ಕ ಪಡೆದಿರುವ ಎಲ್ಲರೂ ಅರ್ಜಿ ಸಲ್ಲಿಸುವುದು ಅಗತ್ಯ. ಇದು ಎಲ್ಲ ಅಕ್ರಮ ಸಂಪರ್ಕಗಳಿಗೂ ಅನ್ವಯ. ಮಂಡ್ಯ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಜನರು ವಸತಿ ಸಂಪರ್ಕಕ್ಕೂ ಹಣ ಪಾವತಿಸುತ್ತಿಲ್ಲ. ಮಂಡ್ಯದಲ್ಲಿ ಸುಮಾರು 30 ಊರುಗಳು ಬಿಲ್ ಪಾವತಿಸಿಲ್ಲ. ಅಲ್ಲೆಲ್ಲ ವಿದ್ಯುತ್ ನಿಲುಗಡೆಗೆ ಸೂಚಿಸಲಾಗಿದೆ. ಮಂಡ್ಯದಲ್ಲಿ ಜನಪ್ರತಿನಿಧಿಗಳ ಸಭೆ ನಡೆಸಿ, ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.
ದರ ಏರಿಕೆ?
ಎಲ್ಲ ಎಸ್ಕಾಂಗಳು ಬುಧವಾರ ಸಭೆ ನಡೆಸಿದ್ದು, ವಿದ್ಯುತ್ ದರ ಏರಿಕೆ ಸಂಬಂಧ ಕೆಇಆರ್ಸಿಗೆ ಪ್ರಸ್ತಾಪ ಸಲ್ಲಿಸಿವೆ. ಅದು ಮುಂದಿನ ನಿರ್ಧಾರ ಕೈಗೊಳ್ಳುತ್ತದೆ. ರಾಜ್ಯಾದ್ಯಂತ ವಿದ್ಯುತ್ ಮಾರ್ಗಗಳನ್ನು ಸದೃಢಗೊಳಿಸಬೇಕಿದೆ. ಇದಕ್ಕಾಗಿ ಎಸ್ಕಾಂಗಳಿಗೆ ಹಣ ಬೇಕಿದೆ ಎಂದು ಪರೋಕ್ಷವಾಗಿ ವಿದ್ಯುತ್ ದರ ಹೆಚ್ಚಳದ ಬಗ್ಗೆ ಸಚಿವ ಡಿ.ಕೆ. ಶಿವಕುಮಾರ್ ಸುಳಿವು ನೀಡಿದರು.