ಶಿವಸೇನೆ ಪ್ರಸ್ತಾಪದಲ್ಲಿ ಹೊಸದೇನು ಇಲ್ಲ: ಬಿಜೆಪಿ
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸೀಟು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಶಿವಸೇನೆ ಮುಂದಿಟ್ಟಿದ್ದ ಪ್ರಸ್ತಾಪವನ್ನು ಬಿಜೆಪಿ ತಿರಸ್ಕರಿಸಿದ್ದು...
ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸೀಟು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಶಿವಸೇನೆ ಮುಂದಿಟ್ಟಿದ್ದ ಪ್ರಸ್ತಾಪವನ್ನು ಬಿಜೆಪಿ ತಿರಸ್ಕರಿಸಿದ್ದು, 25 ವರ್ಷಗಳ ಮೈತ್ರಿಯಲ್ಲಿ ಮೂಡಿರುವ ಬಿರುಕು ಶಮನಗೊಳ್ಳುವ ಸಾಧ್ಯತೆಗಳು ಗೋಚರಿಸುತ್ತಿಲ್ಲ.
119 ಸ್ಥಾನಗಳಲ್ಲಿ ಸ್ಪರ್ಧಿಸುವಂತಾ ಪ್ರಸ್ತಾಪವನ್ನು ಮುಂದಿಟ್ಟಿದ್ದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಪ್ರಸ್ತಾವವನ್ನು ತಿರಸ್ಕರಿಸಿರುವ ಬಿಜೆಪಿ, ಇದರಲ್ಲಿ ಹೊಸದೇನು ಇಲ್ಲ. ಶಿವಸೇನೆ ಹಳೆಯ ಪ್ರಸ್ತಾಪವನ್ನೇ ಮತ್ತೆ ಮುಂದುವರೆಸಿದೆ ಎಂದು ಹೇಳಿದೆ.
ಸೀಟು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಬಿಜೆಪಿಗೆ ಅಂತಿಮ ಪ್ರಸ್ತಾವ ನೀಡಿದ್ದರು. ಬಿಜೆಪಿಗೆ 119 ಸೀಟುಗಳನ್ನು ಸ್ಪರ್ಧಿಸುವಂತೆ, ಇನ್ನುಳಿದಂತೆ 18 ಸ್ಥಾನಗಳಲ್ಲಿ ಮಹಾಯುತಿ ಪಕ್ಷ ಸ್ಪರ್ಧಿಸಲಿದ್ದು, 151 ಸ್ಥಾನಗಳಲ್ಲಿ ಶಿವಸೇನೆ ಸ್ಪರ್ಧಿಸಲಿದೆ ಎಂದು ಠಾಕ್ರೆ ಹೇಳಿದ್ದಾರೆ.
ಸೀಟು ಹೊಂದಾಣಿಕೆಗೆ ಮೈತ್ರಿಪಕ್ಷ ಬಿಜೆಪಿ ಪಟ್ಟು ಹಿಡಿದಿರುವುದಕ್ಕೆ ಉದ್ಧವ್ ಠಾಕ್ರೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಮೈತ್ರಿ ಉಳಿಸಿಕೊಳ್ಳಲು ಎಲ್ಲ ರೀತಿಯ ಪ್ರಯತ್ನ ನಡೆಸುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಇದು ಅತ್ಯಂತ ದುರದೃಷ್ಟಕರ ಬೆಳವಣಿಗೆ. ನಾವು ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಬೇಕೆಂಬ ಉತ್ಸುಕತೆಯಲ್ಲಿದ್ದೇವು. ಆದರೆ ಮೈತ್ರಿಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆ ಮನಸ್ಸಿಗೆ ತುಂಬಾ ನೋವು ತಂದಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಎರಡೂವರೆ ದಶಕಗಳ ಮೈತ್ರಿಗೆ ಬೆಲೆ ಕೊಡುವುದಿಲ್ಲ ಎನ್ನುವುದಾದರೆ ನಾವು ಮುಂದುವರಿಯಬೇಕೆ ಎಂಬ ಪ್ರಶ್ನೆ ಮೂಡಿದೆ.