ಸಿದ್ಧಗಂಗಾ ಮಠ ಶ್ರೀಗಳ ಆಶೀರ್ವಾದ ಪಡೆದ ಮೋದಿ
ಪ್ರಧಾನಿ ಮೋದಿ ಸಿದ್ಧಗಂಗಾ ಮಠಕ್ಕೆ..
ತುಮಕೂರು: 'ಮಾಮ್' ನೌಕೆ ಮಂಗಳನ ಕಕ್ಷೆಗೆ ಯಶಸ್ವಿಯಾಗಿ ತಲುಪಿದ ನಂತರ ತುಮಕೂರಿಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಇಲ್ಲಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಡಾ. ಶಿವಕುಮಾರ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.
ಇಂದು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಮೋದಿ, ಡಾ. ಶಿವಕುಮಾರ ಶ್ರೀಗಳ ಕಾಲು ಮುಟ್ಟಿ ನಮಸ್ಕರಿಸಿ ಅವರ ಆಶೀರ್ವಾದ ಪಡೆದಿದ್ದಾರೆ. ರಾಜ್ಯಪಾಲ ವಿ.ಆರ್. ವಾಲಾ ಅವರು ಪ್ರಧಾನಿಗಳ ಜೊತೆಗಿದ್ದರು.
ಮಠದ ಮಕ್ಕಳೊಂದಿಗೆ 20 ನಿಮಿಷಗಳ ಸಮಾಲೋಚನೆ ನಡೆಸಿದ ಮೋದಿ, ನಾನು ಮುಖ್ಯಮಂತ್ರಿಯಾಗಿದ್ದಾಗ ಸಿದ್ಧಗಂಗಾ ಮಠಕ್ಕೆ ಬಂದಿದ್ದೆ. ಆಗ ನಾನು ಪ್ರಧಾನಿಯಾಗಬೇಕು ಎಂದು ಶ್ರೀಗಳು ಆಶೀರ್ವಾದಿಸಿದ್ದರು. ಈ ಆಶೀರ್ವಾದ ನನ್ನ ಪಾಲಿಗೆ ಅತ್ಯಂತ ಮಹತ್ವವಾದದ್ದು ಎಂದು ಹೇಳಿದ್ದಾರೆ.
ಸಾಧು ಸಂತರು ದೇಶಕ್ಕೆ ಏನೂ ಮಾಡಿಲ್ಲ ಎಂಬ ಮಾತಿದೆ, ಆದರೆ ದೇಶ ನಿರ್ಮಾಣವಾಗಿರುವುದು ಸಾಧು ಸಂತರಿಂದಲೇ. ಶತಾಯುಷಿ ಶಿವಕುಮಾರ ಸ್ವಾಮೀಜಿ ಅವರ ಸಾಧನೆ ಅಪಾರ, ಸಮಾಜಕ್ಕೆ ಸ್ವಾಮೀಗಳು ಅಪಾರ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು.
ನಾನು ಮಹತ್ವಪೂರ್ಣ ಕಾರ್ಯ ನಿಮಿತ್ತ ಕಾರ್ನಾಟಕಕ್ಕೆ ಬಂದಿದೆ. ಮೊದಲ ಪ್ರಯತ್ನದಲ್ಲೇ 'ಮಾಮ್' ನೌಕೆ ಮಂಗಳನ ಕಕ್ಷೆಗೆ ಯಶಸ್ವಿಯಾಗಿ ತಲುಪಿದೆ. ಮಾಮ್(ಮಾರ್ಸ್ ಆರ್ಬಿಟ್ ಮಿಷನ್) ಯಶಸ್ವಿಗೆ ಇಸ್ರೋ ವಿಜ್ಞಾನಿಗಳು ಸಾಕಷ್ಟು ಶ್ರಮಪಟ್ಟಿದ್ದಾರೆ. ದೇಶದ ಇಂತಹ ಸಾಧನೆಗೆ ಕಾರಣರಾದ ಇಸ್ರೋ ವಿಜ್ಞಾನಿಗಳಿಗೆ ಎಲ್ಲರೂ ಎದ್ದು ನಿಂತು ಅಭಿನಂದನೆ ಸಲ್ಲಿಸೋಣ ಎಂದು ಮೋದಿ ಮಕ್ಕಳಿಗೆ ಕರೆ ನೀಡಿದ್ದಾರೆ.
ಮೋದಿ ಕರೆಗೆ ಓಗೊಟ್ಟ ಮಕ್ಕಳು ಎದ್ದು ನಿಂತು ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದರು.