ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ

ವಿಶ್ವವಿಖ್ಯಾತ ಮೈಸೂರು ದಸರಾಗೆ ಗುರುವಾರ ಅದ್ಧೂರಿ ಚಾಲನೆ ದೊರೆತಿದೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಗಿರೀಶ್ ...

Lingaraj Badiger
Updated On : 25 Sept 2014, 11:20 am

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ಗುರುವಾರ ಅದ್ಧೂರಿ ಚಾಲನೆ ದೊರೆತಿದೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಗಿರೀಶ್ ಕಾರ್ನಾಡ್ ಅವರು ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ನಾಡಹಬ್ಬ ದಸರಾಗೆ ಚಾಲನೆ ನೀಡಿದರು.

ಇಂದು ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಗಿರೀಶ್ ಕಾರ್ನಾಡ್, ಮುಖ್ಯಮಂತ್ರಿ ಸಿದ್ದರಮಾಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು, ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇವಾಲಯದ ಆವರಣದ ವೇದಿಕೆಯಲ್ಲಿ ಬೆಳ್ಳಿರಥದಲ್ಲಿದ್ದ ಚಾಮುಂಡಿ ದೇವಿಯ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ 2014ರ ದಸರಾ ಮಹೋತ್ಸವನ್ನು ಉದ್ಘಾಟಿಸಿದರು.

ನಾಡಹಬ್ಬ ದಸರಾಗೆ ಚಾಲನೆ ನೀಡಿ ಮಾತನಾಡಿದ ಸಾಹಿತಿ ಗಿರೀಶ್ ಕಾರ್ನಾಡ್ ಅವರು, ದಸರಾ ಉದ್ಘಾಟನೆಗೆ ಅವಕಾಶ ಸಿಕ್ಕಿದ್ದು, ನನ್ನ ಭಾಗ್ಯ. ಈ ಅವಕಾಶ ನೀಡಿದ್ದಕ್ಕೆ ಧನ್ಯವಾದ ಎಂದರು.

1926ರಲ್ಲಿ ನಾಡಹಬ್ಬ ಎಂಬ ಹೆಸರು ಬಂತು ಮತ್ತು ಇದು ಹುಟ್ಟಿಕೊಂಡಿದ್ದು ಧಾರವಾಡದಲ್ಲಿ, ಮೈಸೂರಿನಲ್ಲಿ ಅಲ್ಲ ಎಂದು ಕಾರ್ನಾಡ್ ಹೇಳಿದರು.

ಇನ್ನು ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದಸರಾ ಉದ್ಘಾಟಿಸಿದ ಕಾರ್ನಡ್ ಅವರನ್ನು ಅಭಿನಂದಿಸಿದರು. ಅಲ್ಲದೆ ನಾಡಿನ ಸಮಸ್ತ ಜನತೆಗೆ ದಸರಾ ಹಬ್ಬದ ಶುಭಾಶಯ ಕೋರಿದರು.

ಮೈಸೂರು ದಸರಾಗೆ 400 ವರ್ಷಗಳ ಇತಿಹಾಸ ಇದೆ. ಮೈಸೂರು ದಸರಾ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಇದು ನಮ್ಮ ನಾಡಹಬ್ಬ. ಹೀಗಾಗಿ ಇದನ್ನು ನಿಲ್ಲಿಸಲಾಗುವುದಿಲ್ಲ ಎಂದು ಹೇಳಿದರು.

ಕಾರ್ನಾಡ್ ಓರ್ವ ಶ್ರೇಷ್ಠ ಸಾಹಿತಿ, ಆಸ್ತಿಕ ಹಾಗೂ ನಾಸ್ತಿಕರ ಬಗ್ಗೆ ಕಾರ್ನಾಡ್ ವಿವರಣೆ ನೀಡಿದ್ದಾರೆ, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರತಿಭಟನೆ ಮಾಡುವ ಹಕ್ಕು ಇದೆ. ಆದರೆ ಆಸ್ತಿಕರ ಬಗ್ಗೆ ಆರೋಗ್ಯಕರ ಚರ್ಚೆಯಾಗಬೇಕು. ನಾನು ಸಹ ದೇವಾಲಯಗಳಿಗೆ ಹೋಗುತ್ತೇನೆ. ಆದರೆ ಅದನ್ನೆ ಅಭ್ಯಾಸ ಮಾಡಿಕೊಂಡಿಲ್ಲ. 'ಸತ್ಯವೇ ಸ್ವರ್ಗ, ಮಿಥ್ಯವೇ ನರಕ' ಎಂಬುದನ್ನು ಪಾಲಿಸಬೇಕು ಎಂದು ಹೇಳಿದರು.

ಪ್ರತಿಭಟನಾಕಾರರ ಬಂಧನ: ಸಾಹಿತಿ ಗಿರೀಶ್ ಕಾರ್ನಾಡ್ ಅವರು ದಸರಾ ಉದ್ಘಾಟಿಸುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿಯ ಯುವ ಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement